ಅಪ್ಪ, ಮಗನಿಂದ ಸೋಲು: ಬಚ್ಚೇಗೌಡ
ಚಿಕ್ಕಬಳ್ಳಾಪುರ: ತಮ್ಮನ್ನು ಸೋಲಿಸಿ, ವೀರಪ್ಪ ಮೊಯ್ಲಿರನ್ನು ಗೆಲ್ಲಿಸುವ ಪೂರ್ವ ನಿಯೋಜಿತ ಒಳ ಒಪ್ಪಂದದಂತೆ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಚಿಕ್ಕಬಳ್ಳಾಪುರದಲ್ಲಿ ಚುನಾವಣೆಗೆ ಸ್ಪರ್ಧಿಸಿದರು. ಕುತಂತ್ರ ರಾಜಕಾರಣದಲ್ಲಿ ಕೊನೆಗೂ ಯಶಸ್ವಿಯಾದರು ಎಂದು ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಿ.ಎನ್. ಬಚ್ಚೇಗೌಡ ಆರೋಪಿಸಿದರು.
ನಗರದ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇಲ್ಲಿ ನಾನು ಚುನಾವಣೆಗೆ ನಿಂತ ಹಿನ್ನೆಲೆಯಲ್ಲಿ ಬಿಜೆಪಿ ಗೆಲುವು ಸಾಧಿಸುತ್ತದೆ ಎನ್ನುವುದನ್ನರಿತ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಮತ್ತು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಕಾಂಗ್ರೆಸ್ ಅಭ್ಯರ್ಥಿ ವೀರಪ್ಪ ಮೊಯ್ಲಿಯೊಂದಿಗೆ ಒಳ ಒಪ್ಪಂದ ಮಾಡಿಕೊಂಡರು. ಒಕ್ಕಲಿಗರ ಮತ ವಿಭಜನೆಗಾಗಿ ಕುಮಾರಸ್ವಾಮಿ ಕೊನೆ ಗಳಿಗೆಯಲ್ಲಿ ಚುನಾವಣೆಗೆ ನಿಂತರು. ಇದರಿಂದ ನಾನು ಸೋಲಬೇಕಾಯಿತು. ನನ್ನ ಸೋಲಿಗೆ ಅಪ್ಪ, ಮಗನೇ (ಕುಮಾರಸ್ವಾಮಿ ಮತ್ತು ದೇವೇಗೌಡ) ಕಾರಣ ಎಂದು ಆರೋಪಿಸಿದರು. ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಮೂರನೇ ಸ್ಥಾನಕ್ಕೆ ಹೋಗಿದ್ದು ಅವರಿಗೆ ಹಾಗೂ ಅವರ ಪಕ್ಷಕ್ಕೆ ಹಿನ್ನಡೆಯಾಗಿದೆ ಹೊರತು ನಮ್ಮ ಪಕ್ಷಕ್ಕೆ ಯಾವುದೇ ಹಿನ್ನಡೆ ಆಗಿಲ್ಲ. ಕಳೆದ ಚುನಾವಣೆಯಲ್ಲಿ ನಮ್ಮ ಪಕ್ಷಕ್ಕೆ ಕಡಿಮೆ ಮತ ಬಂದಿತ್ತು. ಆದರೆ ಈ ಬಾರಿ ಹೆಚ್ಚು ಮತ ಬಂದಿವೆ. ನನ್ನ ಸೋಲಿಗೆ ಕಾರಣರಾದ ಕುಮಾರಸ್ವಾಮಿಗೆ ಒಳ್ಳೆಯದಾಗಲಿ ಎಂದರು.
ನಾನು ಅತ್ಯಲ್ಪ ಮತಗಳ ಅಂತರದಿಂದ ಇಲ್ಲಿ ಸೋಲನ್ನಪ್ಪಿದ್ದೇನೆ. ಇಲ್ಲಿ ನಾನು ಗೆದ್ದಿದ್ದರೆ ಕೇಂದ್ರ ಸರ್ಕಾರದಿಂದ ಹೆಚ್ಚಿನ ಅನುದಾನ ತಂದು ಅಭಿವೃದ್ಧಿ ಕೈಗೊಳ್ಳಲು ಸುಲಭವಾಗುತ್ತಿತ್ತು. ಸೋಲಿನಿಂದ ಧೃತಿಗೆಡುವುದಿಲ್ಲ. ನಾನೊಬ್ಬ ಕ್ರೀಡಾಪಟು, ಸೋಲು ಗೆಲುವು ಸಮಾನವಾಗಿ ತೆಗೆದುಕೊಳ್ಳುತ್ತೇನೆ ಎಂದರು.
ಗೋಷ್ಠಿಯಲ್ಲಿ ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ ಡಾ. ಮಂಜುನಾಥ್, ಮುಖಂಡರಾದ ಎ.ವಿ. ಬೈರೇಗೌಡ, ಅಗಲಗುರ್ಕಿ ಚಂದ್ರಶೇಖರ್, ಕೃಷ್ಣಮೂರ್ತಿ, ಶ್ರೀನಿವಾಸ್ ರೆಡ್ಡಿ, ಸುಬ್ಬರಾಜು, ವರದರಾಜು ಇದ್ದರು.