ಕೋಚಿಮುಲ್ ಚುನಾವಣೆಗೆ ಏರಿದ ಕಾವು
ಟೇಕಲ್: ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳ ಪ್ರತಿಷ್ಠಿತ ಹಾಲು ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟದ ಆಡಳಿತ ಮಂಡಳಿಗೆ ಮೇ 25ರಂದು ಚುನಾವಣೆ ನಡೆಯಲಿದ್ದು, ಮಾಲೂರು ತಾಲೂಕಿನಲ್ಲೂ ಚುನಾವಣೆ ಕಾವು ರಂಗೇರಿದೆ.
ಜೆಡಿಎಸ್‌ನಿಂದ ತಾಪಂ ಮಾಜಿ ಅಧ್ಯಕ್ಷ ಹಾಗೂ ಶಾಸಕರ ಆಪ್ತ ಕೆ.ವೈ, ನಂಜೇಗೌಡರು ಅಭ್ಯರ್ಥಿಯಾಗಿದ್ದು, ಪ್ರಚಾರದಲ್ಲಿ ತೊಡಗಿದ್ದಾರೆ.
ಕಾಂಗ್ರೆಸ್‌ನಿಂದ ಜಗದೇನಹಳ್ಳಿ ಶ್ರೀನಿವಾಸರೆಡ್ಡಿ, ಹುಂಗೇನಹಳ್ಳಿ ಪುಟ್ಟಣ್ಣ ಮತ್ತು ನಕ್ಕನಹಳ್ಳಿಯಿಂದ ರವಿಂದ್ರಗೌಡ ಮೂವರು ಆಕಾಂಕ್ಷಿಗಳಾಗಿದ್ದಾರೆ. ನೂತನ ಸಂಸದ ಕೆ.ಎಚ್.ಮುನಿಯಪ್ಪ ಅವರು ಯಾರನ್ನು ಆಯ್ಕೆ ಮಾಡುತ್ತಾರೋ ಅವರೇ ಅಭ್ಯರ್ಥಿಯಾಗಲಿದ್ದಾರೆ. ಕಳೆದ ಅವಧಿಯಲ್ಲಿ ಜೆಡಿಎಸ್ ಬೆಂಬಲಿತ ಡಾ.ಎ.ವಿ.ಪ್ರಸನ್ನ ಕೋಚಿಮುಲ್ ನಿರ್ದೇಶಕರಾಗಿ ನಂತರ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು. ಆದರೆ, ಈ ಬಾರಿ ಜೆಡಿಎಸ್‌ನಿಂದ ನಂಜೇಗೌಡರು ಅಭ್ಯರ್ಥಿಯಾಗಲಿರುವುದರಿಂದ ಪ್ರಸನ್ನ ಅವರು ಬಹುತೇಕ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿವ ಸಾಧ್ಯತೆ ಇದೆ. ಮಾಲೂರು ತಾಲೂಕಿನಲ್ಲಿ 140 ಹಾಲು ಉತ್ಪಾದಕರ ಸಹಕಾರ ಸಂಘಗಳಿವೆ. ಈ ಪೈಕಿ ಹಳೇಹಳ್ಳಿ ಮತ್ತು ಜಂಗಾನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘಗಳು ಜಿಲ್ಲಾ ಒಕ್ಕೂಟದಲ್ಲಿ ಷೇರುದಾರರಾಗಿ ಒಂದು ವರ್ಷ ಪೂರೈಸಿಲ್ಲ. ಹಾಗಾಗಿ ಅವುಗಳಿಗೆ ಮತದಾನ ಹಕ್ಕು ದೊರೆತಿಲ್ಲ. ಇದೇ ವೇಳೆ, ಭುವನಹಳ್ಳಿ ಮತ್ತು ವೀರಕಪುತ್ರ ಸಹಕಾರ ಸಂಘಗಳು ಸೂಪರ್‌ಸೀಡ್ ಆಗಿವೆ. ಅಂತಿಮವಾಗಿ 125 ಮಂದಿ ಪುರುಷ ಹಾಗೂ 10 ಮಂದಿ ಮಹಿಳಾ ಮತದಾರರಿದ್ದಾರೆ.