ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ನಕಲಿ ಜಾತಿ ಪ್ರಮಾಣ ಪತ್ರ ಪ್ರಕರಣ: ಶಿಕ್ಷಕಿ ವಜಾ

Rashmi Kasaragodu
Updated On : 18 May 2014, 12:57 pm

ಕೋಲಾರ: ಕುರುಬ ಜನಾಂಗಕ್ಕೆ ಸೇರಿರುವ ಶಿಕ್ಷಕಿ ಅಮರಾವತಿ ಅವರು ಪರಿಶಿಷ್ಟ ಜಾತಿಯ ನಕಲಿ ಪ್ರಮಾಣ ಪತ್ರ ನೀಡಿ ಉದ್ಯೋಗ ಗಿಟ್ಟಿಸಿಕೊಂಡಿದ್ದಾರೆಂಬ ಆರೋಪದ ಮೇಲೆ ಶಿಕ್ಷಕಿಯನ್ನು ಸೇವೆಯಿಂದ ವಜಾಗೊಳಿಸಿರುವುದಾಗಿ ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಪದ್ಮನಾಭ್ ಅವರು ತಿಳಿಸಿದ್ದಾರೆ. ನಗರದ ಗಲ್ ಪೇಟೆಯ ನಿವಾಸಿ ಪಂಡಿತ್ ಮುನಿವೆಂಕಟಪ್ಪ ಎಂಬುವರ ಪತ್ನಿ ಅಮರಾವತಿ ಕುರುಬ ಸಮಾಜಕ್ಕೆ ಸೇರಿದ್ದು, ಬಂಗಾರಪೇಟೆಯ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಸಹ ಶಿಕ್ಷಕಿಯಾಗಿದ್ದರು. ಪತಿ ಪರಿಶಿಷ್ಟ ಜಾತಿಯವರಾಗಿರುವುದರಿಂದ ತಾವೂ ಸಹ ಇದೇ ಸಮುದಾಯಕ್ಕೆ ಸೇರಿದವರೆಂದು ನಕಲಿ ಜಾತಿ ಪ್ರಮಾಣ ಪತ್ರ ನೀಡಿ, ಶಿಕ್ಷಕಿ ಹುದ್ದೆ ಗಿಟ್ಟಿಸಿಕೊಂಡಿದ್ದರು. ಅದೇ ಮೀಸಲು ಅಡಿಯಲ್ಲಿ ಪ್ರೌಢಶಾಲಾ ಶಿಕ್ಷಕರಾಗಿ ಬಡ್ತಿ ಪಡೆದಿದ್ದರು. ಪರಿಶಿಷ್ಟ ಜಾತಿ ಮತ್ತು ಪ.ಪಂಗಡಗಳ ಕಾಯಿದೆ ಅನ್ವಯ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ ಆರೋಪಿಯನ್ನು ಬಂಧಿಸಲಾಗಿತ್ತು. ಆರೋಪಿಯ ಬಂಧನ ಹಾಗೂ ಕ್ರಿಮಿನಲ್ ಕೇಸ್ ಎದುರಿಸುತ್ತಿರುವುದರಿಂದ ಶಿಕ್ಷಕಿ ಅಮರಾವತಿಯವರನ್ನು ಸೇವೆಯಿಂದ ವಜಾ ಮಾಡಲಾಗಿದೆ ಎಂದಿದ್ದಾರೆ.


ಆಸ್ತಿಗಾಗಿ ಅತ್ತೆ ಕೊಂದ ಸೊಸೆ: ಇಬ್ಬರ ಬಂಧನ

ಚಿಕ್ಕಬಳ್ಳಾಪುರ: ಕಳೆದ 5 ನಗರದ ಕೊರಚರಪೇಟೆ ಪೇಟೆಯಲ್ಲಿ ನಡೆದ ವೃದ್ಧ ಮಹಿಳೆಯೊಬ್ಬರ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಇಬ್ಬರು ಆರೋಪಿಗಳನ್ನು ಬಂಧಿಸಿದ್ದು ಆಕೆಯ ಸೊಸೆಯೇ ತನ್ನ ತಮ್ಮನ ಸಹಾಯದಿಂದ ಕೊಲೆ ಮಾಡಿರುವುದು ಬಹಿರಂಗವಾಗಿದೆ. ಬಂಧಿತ ಆರೋಪಿಗಳು ರೇಖಾ ಮತ್ತು ಈಕೆಯ ತಮ್ಮ ಬಾಲಾಜಿ ಅಲಿಯಾಸ್ ಬಾಲು. ಅತ್ತೆಯ ಸಾಯುವ ತನಕ ಆಸ್ತಿ ಸಿಗುವುದಿಲ್ಲ ಎಂಬ ದುರಾಲೋಚನೆಯಲ್ಲಿ ಆರೋಪಿಗಳು ಈ ದುಷ್ಕೃತ್ಯ ಎಸಗಿದ್ದಾರೆ. ನಗರದ ಕೊರಚರಪೇಟೆಯ ಕಾಂತಮ್ಮ (58) ಅನುಮಾನಾಸ್ಪದ ರೀತಿಯಲ್ಲಿ ತಮ್ಮ ಮನೆಯಲ್ಲಿ ಮೃತಪಟ್ಟಿದ್ದರು. ಇದರಿಂದ ಅಸಹಜ ಸಾವು ಎಂದು ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಕೈಗೊಂಡಾಗ ಸೊಸೆ ರೇಖಾಳೇ ಕಾಂತಮ್ಮಳನ್ನು ಕೊಲೆ ಮಾಡಿರುವುದು ಬಯಲಾಗಿದೆ. ಕಳೆದ ಕೆಲ ವರ್ಷಗಳ ಹಿಂದೆ ಗಂಡ ಅಶ್ವತ್ಥಪ್ಪನನ್ನು ಕಳೆದುಕೊಂಡಿದ್ದ ವೃದ್ಧ ಮಹಿಳೆ ಕಾಂತಮ್ಮ ಕೊರಚರಪೇಟೆಯಲ್ಲಿ ಒಂದು ಅಂತಸ್ತಿನ ಸ್ವಂತ ಮನೆ ಹೊಂದಿದ್ದಾರೆ. ಈಕೆಗೆ ಒಬ್ಬ ಪುತ್ರಿ ಮತ್ತು ಪುತ್ರ ಇದ್ದಾರೆ. ಮೇ 14ರ ಸಂಜೆ ಕಾಂತಮ್ಮ ಒಬ್ಬಳೇ ಇರುವುದನ್ನು ನೋಡಿ ಮನೆಗೆ ಹೋದ ಆರೋಪಿಗಳಿಬ್ಬರು ದಿಂಬನ್ನು ಕಾಂತಮ್ಮಳ ಮುಖದ ಮೇಲಿಟ್ಟು ಉಸಿರುಗಟ್ಟಿಸಿ ಕೊಲೆ ಮಾಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement