ನದಿ ಜೋಡಣೆ, ರೈತರ ಸಾಲ ಮನ್ನಾ: ಮೋದಿಗೆ ಆಗ್ರಹ
ಕೋಲಾರ: ನಿರೀಕ್ಷೆಯಂತೆ ನರೇಂದ್ರ ಮೋದಿಯವರು ಪ್ರಧಾನ ಮಂತ್ರಿಯಾಗುತ್ತಿರುವುದಕ್ಕೆ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಅಭಿನಂದನೆ ತಿಳಿಸಿದ್ದಾರೆ. ಶನಿವಾರ ನಡೆದ ಸಭೆಯಲ್ಲಿ ಮುಖಂಡರು ಮಾತನಾಡಿ, ಹಿಂದೆ ಕೇಂದ್ರದಲ್ಲಿ 10 ವರ್ಷಗಳಿಂದ ಸರ್ಕಾರ ನಡೆಸಿದ ಯುಪಿಎ ದುರಾಡಳಿತದಿಂದ ಜನಸಾಮಾನ್ಯರು ತತ್ತರಿಸಿ ಹೋಗಿದ್ದಾರೆ, ಯುಪಿಎ ಮತ್ತು ಕಾಂಗ್ರೆಸ್ ಸರ್ಕಾರದಲ್ಲಿ ನಡೆದ ಭ್ರಷ್ಟಾಚಾರದಿಂದ ಮತದಾರರು ತಕ್ಕ ಪಾಠಕಲಿಸಿದ್ದಾರೆ, ಕೇಂದ್ರದಲ್ಲಿ ಬಿಜೆಪಿ ಸರ್ಕಾರ ರಚನೆಯಾಗಿರುವುದರಿಂದ ರಾಷ್ಟ್ರದಲ್ಲಿ ಮತ್ತು ರಾಜ್ಯದಲ್ಲಿ ರೈತರು ಬೆಳೆಯುವ ಬೆಳೆಗೆ ಬೆಂಬಲ ಬೆಲೆ ನಿಗದಿ ಮಾಡುವ ಮಾರುಕಟ್ಟೆ ನಿಯಮ ಬದಲಿಸಲು ಬೆಲೆ ನೀತಿ ಜಾರಿಗೆ ಮಾಡಬೇಕು ಎಂದು ಒತ್ತಾಯಿಸಿದರು. ನಿರುದ್ಯೋಗ ಸಮಸ್ಯೆ ನಿವಾರಣೆ ಮಾಡಲು ಕ್ರಮ ಕೈಗೊಳ್ಳಬೇಕು, ನೀರಿನ ಸಮಸ್ಯೆ ನಿವಾರಣೆ ಮಾಡಬೇಕಾದರೆ ಮಾಜಿ ಪ್ರಧಾನಿ ಮಂತ್ರಿ ವಾಜಪೇಯಿ ಅವರ ಕನಸಾಗಿರುವ ನದಿಗಳ ಜೋಡಣೆ ಯೋಜನೆ ಮತ್ತು ಪರಮಶಿವಯ್ಯ ವರದಿಯಾಧಾರಿತ ಶಾಶ್ವತ ನೀರಾವರಿ ಯೋಜನೆ ಆನುಷ್ಠಾನ ಮಾಡಬೇಕು ಎಂದರು. ಕೋಟಿಗಾನಹಳ್ಳಿ ಗಣೇಶ್ ಗೌಡ, ಕೆ.ಬಿ. ಮುನಿವೆಂಕಟಪ್ಪ, ಸಿ.ವಿ.ಪ್ರಭಾಕರ್ ಗೌಡ, ಚೌಡೇಗೌಡ, ಮುಜುಬ್ ಪಾಷ ಸೇರಿ ಅನೇಕರಿದ್ದರು.