ಬರಗಾಲಪೀಡಿತ ತಾಲೂಕೆಂದು ಘೋಷಿಸಲು ರೈತ ಸಂಘ ಆಗ್ರಹ
ಬಂಗಾರಪೇಟೆ: ನಿರಂತರವಾಗಿ ಬರಗಾಲಕ್ಕೆ ಸಿಲುಕಿರುವ ಬಂಗಾರಪೇಟೆ ತಾಲೂಕನ್ನು ಮುಂದಿನ 5ವರ್ಷಕ್ಕೆ ಬರಪೀಡಿತ ಪ್ರದೇಶವೆಂದು ಘೋಷಿಸಿ, ವಿಶೇಷ ಪ್ಯಾಕೇಜ್ ನೀಡಿ ಅಭಿವೃದ್ಧಿಗೊಳಿಸಬೇಕು ಎಂದು ಆಗ್ರಹಿಸಿ ರೈತ ಸಂಘದ ಮುಖಂಡರು ತಾಲೂಕು ಕಚೇರಿ ಎದುರು ಪ್ರತಿಭಟನೆ ಮಾಡಿದರು.
ಸರ್ಕಾರ ತಾಲೂಕನ್ನು ಬರಪೀಡಿತ ಪ್ರದೇಶವೆಂದು ಘೋಷಣೆ ಮಾಡಿದ್ದರೂ ಯಾವುದೇ ಅನುಕೂಲಗಳನ್ನು ಕಲ್ಪಿಸಿಲ್ಲ. ಇದರಿಂದ ಮನುಷ್ಯರ ಜೊತೆ ಮೂಕಪ್ರಾಣಿಗಳಿಗೂ ಕುಡಿಯಲು ನೀರಿನಲ್ಲದೆ ಪರದಾಡುತ್ತಿವೆ. ತಿನ್ನಲು ಮೇವೂ ಇಲ್ಲ. ಮೊದಲು ಮೇವು ಬ್ಯಾಂಕ್ ತೆರೆಯಬೇಕು. ಕುಡಿಯುವ ನೀರು ಕಲ್ಪಿಸುವ ಯೋಜನೆಗಳನ್ನು ವಿಳಂಬ ಮಾಡದೆ ಕಾರ್ಯಗತಗೊಳಿಸಬೇಕು ಎಂದು ಆಗ್ರಹಿಸಿದರು. ತಹಸೀಲ್ದಾರ್ ಉಷಾ ಅವರಿಗೆ ಮನವಿ ಸಲ್ಲಿಸಲಾಯಿತು. ಪ್ರತಿಭಟನೆಯಲ್ಲಿ ಸಂಘದ ಜಿಲ್ಲಾಧ್ಯಕ್ಷ ನಾರಾಯಣಗೌಡ, ತಾಲೂಕು ಅಧ್ಯಕ್ಷ ಮರಗಲ್ ಶ್ರೀನಿವಾಸ್, ಮೂರಂಡಹಳ್ಳಿ ಶಿವಾರೆಡ್ಡಿ, ವೆಂಕಟರಮಣಪ್ಪ, ದೊಡ್ಡಪ್ಪ, ರಮೇಶ್, ಮುನಿರಾಜು, ಗಣೇಶ್, ಮಂಜುನಾಥ್, ಮುನಿಸ್ವಾಮಿ ಮತ್ತಿತರರು ಇದ್ದರು