ಬಿಜೆಪಿ ಗೆಲುವು: ಸಂಭ್ರಮಾಚರಣೆ
ಶಿಡ್ಲಘಟ್ಟ: ಲೋಕಸಭಾ ಚುನಾವಣೆಯಲ್ಲಿ ಎನ್ಡಿಎಗೆ ಸಿಕ್ಕಿರುವ ಅಭೂತಪೂರ್ವ ಗೆಲುವು ನರೇಂದ್ರಮೋದಿಯ ವ್ಯಕ್ತಿತ್ವಕ್ಕೆ ದೇಶದ ಜನತೆ ನೀಡಿದ ತೀರ್ಪು ಎಂದು ತಾಲೂಕು ಬಿಜೆಪಿ ಅಧ್ಯಕ್ಷ ಸುರೇಂದ್ರಗೌಡ ಹೇಳಿದರು.
ಪಟ್ಟಣದ ಕೋಟೆ ವೃತ್ತದಲ್ಲಿ ವಿಜಯೋತ್ಸವ ಆಚರಣೆ ಮಾಡಿ ಮಾತನಾಡಿ, ಕಳೆದ ಒಂದು ವರ್ಷದಿಂದ ದೇಶದಲ್ಲಿದ್ದ ನರೇಂದ್ರಮೋದಿಯವರ ಅಲೆ ಇಂದು ಕೇಂದ್ರದಲ್ಲಿ ಸರ್ಕಾರವಾಗಿ ಮಾರ್ಪಟ್ಟಿದೆ. ಈ ಗೆಲುವಿನಿಂದಾಗಿ ದೇಶ ಒಂದು ಸುಭದ್ರ ರಾಷ್ಟ್ರವಾಗುವುದರಲ್ಲಿ ಸಂಶಯವಿಲ್ಲ ಎಂದಿದ್ದಾರೆ.
ಬಿಜೆಪಿ ಮುಖಂಡ ಡಿ.ಆರ್. ಶಿವಕುಮಾರಗೌಡ ಮಾತನಾಡಿ, ಕಳೆದ ಹತ್ತು ವರ್ಷಗಳಲ್ಲಿ ಯುಪಿಎ ಸರ್ಕಾರ ನಡೆಸಿದ್ದ ದುರಾಡಳಿತಕ್ಕೆ ರೋಸಿ ಹೋಗಿದ್ದ ಜನತೆ ಸುಭದ್ರ ರಾಷ್ಟ್ರನಿರ್ಮಾಣದತ್ತ ದಾಪುಗಾಲಿಟ್ಟಿರುವುದು ದೇಶಕ್ಕೆ ಒಳ್ಳೆಯ ದಿನಗಳು ಬಂದಿವೆ ಎನ್ನುವುದನ್ನು ತೋರಿಸಿಕೊಟ್ಟಿದ್ದಾರೆ ಎಂದರು. ಬಿಜೆಪಿ ಜಿಲ್ಲಾ ಕಾರ್ಯದರ್ಶಿ ರಮೇಶ್ ಬಾಯಿರಿ, ಖ.ರಾ. ಖಂಡೇರಾವ್, ಬಳುವನಹಳ್ಳಿ ಲೋಕೇಶ್, ಪುರಸಭಾ ಸದಸ್ಯ ರಾಘವೇಂದ್ರ, ದಾಮೋದರ್, ಮುನಿಕೃಷ್ಣಪ್ಪ, ಮಂಜುಳಾ, ಸುಜಾತಮ್ಮ, ರತ್ನಮ್ಮ, ಮುನಿರತ್ನಮ್ಮ, ಎ.ಎಂ. ತ್ಯಾಗರಾಜ್, ಗಂಗನಹಳ್ಳಿ ರಾಮಾಂಜಿ ಇದ್ದರು.