ಬೆಂಕಿ ಆಕಸ್ಮಿಕ: ಕೃಷಿ ಉಪಕರಣಗಳು ಭಸ್ಮ
ತುರುವೇಕೆರೆ: ವಾಸದ ಮನೆ ಹಾಗೂ ಪಕ್ಕದಲ್ಲೇ ಇದ್ದ ಗುಡಿಸಲಿಗೆ ಆಕಸ್ಮಿಕವಾಗಿ ಬೆಂಕಿ ಬಿದ್ದ ಪರಿಣಾಮ ಕೃಷಿ ಉಪಕರಣಗಳು, ಎತ್ತಿನ ಟೈರ್ ಗಾಡಿ ಸಂಪೂರ್ಣವಾಗಿ ಭಸ್ಮವಾದರೆ ಒಂದು ಜೊತೆ ಎತ್ತು ಬೆಂಕಿಗೆ ಸಿಲುಕಿ ತೀವ್ರವಾಗಿ ಗಾಯಗೊಂಡಿರುವ ಘಟನೆ ತಾಲೂಕಿನ ಹಿಂಡುಮಾರನಹಳ್ಳಿ ಗ್ರಾಮದಲ್ಲಿ ನಡೆದಿದೆ. ಹಿಂಡುಮಾರನಹಳ್ಳಿಯ ಹೆಚ್.ಎಲ್.ರಂಗಪ್ಪ ಎಂಬುವವರಿಗೆ ಸೇರಿದ ಮನೆ ಹಾಗೂ ಗುಡಿಸಲಿಗೆ ಇದ್ದಕ್ಕಿದ್ದಂತೆ ಬೆಂಕಿ ಹತ್ತಿಕೊಂಡಿತು. ಗ್ರಾಮಸ್ಥರು ಧಾವಿಸಿ ಬಂದು ಬೆಂಕಿ ನಂದಿಸಲು ಪ್ರಯತ್ನಿಸಿದರೂ ಯಾವುದೇ ಪ್ರಯೋಜನವಾಗಲಿಲ್ಲ. ಕೂಡಲೇ ತುರುವೇಕೆರೆಯ ಅಗ್ನಿಶಾಮಕದಳ ಸ್ಥಳಕ್ಕೆ ಆಗಮಿಸಿ ಮುಂದಾಗಬಹುದಾದ ಅನಾಹುತವನ್ನು ತಪ್ಪಿಸಿತು. ಘಟನೆಯಲ್ಲಿ ಕೃಷಿ ಉಪಕರಣಗಳು, ದಿನಸಿ ಪದಾರ್ಥಗಳು, ಮಂಚ, ಎತ್ತಿನ ಟೈರ್ ಗಾಡಿ, 25 ಚೀಲ ಬತ್ತ ಸಂಪೂರ್ಣವಾಗಿ ಬೆಂಕಿಗೆ ಆಹುತಿಯಾಗಿದೆ. ಕೊಟ್ಟಿಗೆಯಲ್ಲಿ ಕಟ್ಟಿ ಹಾಕಲಾಗಿದ್ದ ಒಂದು ಜೊತೆ ಎತ್ತಿಗೆ ಬೆಂಕಿ ತಗುಲಿದ ಪರಿಣಾಮ ತೀವ್ರವಾಗಿ ಗಾಯಗೊಂಡು ಪ್ರಾಣಾಪಾಯದ ಭೀತಿಯಲ್ಲಿದೆ. ಸುಮಾರು ಒಂದೂವರೆ ಲಕ್ಷ ರು.ಗಳ ನಷ್ಟ ಸಂಭವಿಸಿರಬಹುದು ಎಂದು ಅಂದಾಜಿಸಲಾಗಿದೆ.