ಕರಿನಾಯಕನಹಳ್ಳಿಯಲ್ಲಿ ಭೂಮಿ ಸ್ವಾಧೀನಕ್ಕೆ ಗ್ರಾಮಸ್ಥರ ವಿರೋಧ
ಕೋಲಾರ: ತಾಲೂಕಿನ ಕರಿನಾಯಕನಹಳ್ಳಿಯಲ್ಲಿ ಕೈಗಾರಿಕೆಗಳ ಸ್ಥಾಪನೆಗಾಗಿ 136 ಎಕರೆ ಜಮೀನನ್ನು ಕರ್ನಾಟಕ ಕೈಗಾರಿಕೆ ಅಭಿವೃದ್ಧಿ ಮಂಡಳಿ ಸ್ವಾಧೀನಕ್ಕೆ ಮುಂದಾಗಿರುವುದನ್ನು ಗ್ರಾಮಸ್ಥರು ವಿರೋಧಿಸಿದ್ದಾರೆ.
ವ್ಯವಸಾಯಕ್ಕೆ ಯೋಗ್ಯವಾಗಿರುವ ಭೂಮಿಯನ್ನು ಯಾವುದೇ ಕಾರಣಕ್ಕೂ ಭೂಸ್ವಾಧೀನ ಪಡಿಸಿಕೊಳ್ಳಬಾರದೆಂದು ಗ್ರಾಮಸ್ಥರು ಗುರುವಾರ ಜಿಲ್ಲಾಧಿಕಾರಿಗಳನ್ನು ಭೇಟಿಯಾಗಿ ಮನವಿ ಸಲ್ಲಿಸಿದ್ದಾರೆ.
ರೈತರ ಭೂಮಿ ಸ್ವಾಧೀನಕ್ಕಾಗಿ ಅದಿಕಾರಿಗಳು ರೈತರಿಗೆ ನೋಟಿಸ್ ನೀಡಿರುವ ಕ್ರಮವನ್ನು ಖಂಡಿಸಿದ ಗ್ರಾಮಸ್ಥರು, ರೈತರಿಗೆ ನ್ಯಾಯ ಒದಗಿಸಬೇಕೆಂದು ಜಿಲ್ಲಾಧಿಕಾರಿ ಡಿ.ಕೆ. ರವಿ ಅವರನ್ನು ಒತ್ತಾಯಿಸಿದರು.
ಗ್ರಾಮದ ಹಿರಿಯರಾದ ಕೆ.ಎಂ. ದೊಡ್ಡಪ್ಪಯ್ಯ ಮಾತನಾಡಿ, ಈಗಾಗಲೇ ಕರಿನಾಯಕನಹಳ್ಳಿ ಗ್ರಾಮಸ್ಥರು ಕೆ.ಐ.ಎ.ಡಿ.ಬಿ.ಗೆ 300 ಎಕರೆ ಜಮೀನು ಕೊಟ್ಟು ಉಳಿದ 136 ಜಮೀನಿನಲ್ಲಿ ಬೋರ್ವೆಲ್ಗಳನ್ನು ಕೊರೆಸಿ ಟೊಮೆಟೋ, ಆಲೂಗಡ್ಡೆ, ರಾಗಿ, ತೊಗರಿ ಮುಂತಾದ ಬೆಳೆಗಳನ್ನು ಬೆಳೆದು ಜೀವನ ಸಾಗಿಸುತ್ತಿದ್ದೇವೆ. ಆದರೆ ಉಳಿದ ಜಮೀನನ್ನು ತಮ್ಮ ವಶಕ್ಕೆ ನೀಡುವಂತೆ ಕೆ.ಐ.ಎ.ಡಿ.ಬಿ. ಏಕಾಏಕಿ ನೋಟಿಸ್ ನೀಡಿರುವುದರಿಂದ ರೈತರು ಬೀದಿ ಪಾಲಾಗಬೇಕಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು.
ಕರಿನಾಯನಹಳ್ಳಿ ಗ್ರಾಮಸ್ಥರೊಂದಿಗೆ ಮಿಂಡಹಳ್ಳಿ ಗ್ರಾಮಸ್ಥರು ಸಹ ಭೂ ಸ್ವಾಧೀನಕ್ಕೆ ವಿರೋಧ ವ್ಯಕ್ತಪಡಿಸಿದರು.
ಸರ್ಕಾರದಿಂದ ನಮಗೆ ಯಾವ ಸವಲತ್ತುಗಳು ಸುಗುತ್ತಿಲ್ಲ. ಬ್ಯಾಂಕುಗಳಲ್ಲಿ ಸಾಲ ಸಿಗುತ್ತಿಲ್ಲ,ಹಿಂದೆ ಕೆ.ಐ.ಎ.ಡಿ.ಬಿ.ಯಿಂದ ಹಣ ಪಡೆದ ಐದಾರು ಕುಟುಂಬಗಳು ಬೀದಿಗೆ ಬಂದಿದ್ದಾರೆ, ರೈತರ ಕಷ್ಟಗಳನ್ನು ಅರ್ಥಮಾಡಿಕೊಂಡು ತಮ್ಮ ಜಮೀನನ್ನು ತಮ್ಮ ವಶಕ್ಕೆ ಬಿಡುವಂತೆ ಕೋರಿದರು.