ಚಿಣ್ಣರೊಂದಿಗೆ ಮುನಿಯಪ್ಪ ಸಂವಾದ
ಕೋಲಾರ: ಕೇಂದ್ರ ಸರ್ಕಾರ ಕಡ್ಡಾಯ ಶಿಕ್ಷಣಕ್ಕಾಗಿ ಜಾರಿಗೆ ತಂದಿರುವ ಯೋಜನೆಗಳನ್ನು ಮಕ್ಕಳು ಸದುಪಯೋಗ ಪಡಿಸಿಕೊಳ್ಳಬೇಕೆಂದು ಸಂಸದ ಕೆ.ಹೆಚ್. ಮುನಿಯಪ್ಪ ಸಲಹೆ ನೀಡಿದರು.
ನಗರದ ಪತ್ರಕರ್ತರ ಭವನದಲ್ಲಿ ಗುರುವಾರ ಜಿಲ್ಲೆಯ ಐದು ಸ್ವಯಂ ಸೇವಾ ಸಂಸ್ಥೆಗಳು ಮಕ್ಕಳಿಗಾಗಿ ಹಮ್ಮಿಕೊಂಡಿದ್ದ ಕಾರ್ಯಾಗಾರ ವೀಕ್ಷಿಸಿದ ಅವರು, ಮಕ್ಕಳೊಂದಿಗೆ ಸಂವಾದ ನಡೆಸಿ, ಸರ್ಕಾರ ನೀಡುವ ಸೌಲಭ್ಯಗಳನ್ನು ಬಳಸಿಕೊಂಡು ಚನ್ನಾಗಿ ಓದಿ ಸತ್ಪ್ರಜೆಗಳಾಗಬೇಕೆಂದು ತಿಳಿಸಿದರು.
ಕಾರ್ಯಾಗಾರದಲ್ಲಿ ಭಾಗವಹಿಸಿರುವ ಮಕ್ಕಳೊಂದಿಗೆ ಕೆಲವು ಪ್ರಶ್ನೆಗಳೊಂದಿಗೆ ಸಂವಾದ ನಡೆಸಿದ ಅವರು,ಬೇರೆ ಕಡೆ ಗಮನ ನೀಡದೆ ಶ್ರದ್ಧೆಯಿಂದ ಓದುವ ಮೂಲಕ ಗುರಿ ಸಾಧಿಸಬೇಕೆಂದರು.
ಪ್ರತಿ ತಿಂಗಳು ಐದು ತಾಲೂಕುಗಳಿಂದ ಒಂದು ತಾಲೂಕಿಗೆ 20 ಮಕ್ಕಳನ್ನು ಜಿಲ್ಲೆಯ ಐದು ಸ್ವಯಂ ಸೇವಾ ಸಂಸ್ಥೆಗಳಾದ ಗ್ರಾಮ ವಿಕಾಸ ಸಂಸ್ಥೆ ಮುಳಬಾಗಿಲು, ಅವಾರ್ಡ್ ಸಂಸ್ಥೆ ಲಕ್ಷ್ಮೀಪುರ, ಧನ್ವಂತರಿ ಸಂಸ್ಥೆ ಅರಳಕುಂಟೆ, ಬಂಗಾರಪೇಟೆ ತಾಲೂಕಿನಿಂದ ಗ್ರಾಮ ವಿಕಾಸ ಸಂಸ್ಥೆ, ಮಾಲೂರಿನ ಗ್ರಾಮೀಣ ಅಭಿವೃದ್ಧಿ ಸಂಸ್ಥೆ ಸಂಯುಕ್ತಾಶ್ರಯದಲ್ಲಿ ಜಿಲ್ಲಾ ಗ್ರಾಮೀಣ ಮಕ್ಕಳ ಒಕ್ಕೂಟ ರಚನೆಯ ಪುನರಾವರ್ತನೆಯನ್ನು ನಡೆಸಲಾಯಿತು.
ಮಕ್ಕಳ ಹಕ್ಕು, ಮಕ್ಕಳ ಗ್ರಾಮ ಸಭೆಯ ಮಹತ್ವ, ಬಾಲ್ಯ ವಿವಾಹದಿಂದಾಗುವ ದುಷ್ಪರಿಣಾಮ ಬಗ್ಗೆ ಮಕ್ಕಳಿಗೆ ತಿಳಿವಳಿಕೆ ನೀಡಲಾಯಿತು.
ಮಕ್ಕಳ ಅಭಿವೃದ್ಧಿ ಹಾಗೂ ಶಿಕ್ಷಣ ಇಲಾಖೆಗಳಿಗೆ ಮಕ್ಕಳಿಂದ ಪತ್ರಾಂದೋಲನ ಮಾಡಿಸುವ ಮೂಲಕ ಮಕ್ಕಳ ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಕೊಳ್ಳುವುದು ಈ ಕಾರ್ಯಾಗಾರದ ಮುಖ್ಯ ಉದ್ದೇಶವಾಗಿದೆ ಎಂದು ಧನ್ವಂತರಿ ಸಂಸ್ಥೆಯ ಮುಖ್ಯಸ್ಥೆ ಶಿಲ್ಪ ತಿಳಿಸಿದರು.
ಹೊನ್ನಶೆಟ್ಟಿಹಳ್ಳಿಯ ಗ್ರಾಮವಿಕಾಸ ಸಂಸ್ಥೆಯ ವಿಜಯಕುಮಾರ್, ವಿಂಧ್ಯಾ, ಧನಲಕ್ಷ್ಮಿ, ಮಹಾಲಕ್ಷ್ಮಿ, ಅವಾರ್‌ಡ್ಸ್‌ಂಸ್ಥೆಯ ಕುಮಾರ್ ಇದ್ದರು.