ಜಿಲ್ಲಾ ಕ್ರೀಡಾಂಗಣ ಅಭಿವೃದ್ಧಿಗೆ ಸಹಕಾರ: ಜಿಪಂ ಅಧ್ಯಕ್ಷರ ಭರವಸೆ
ಕೋಲಾರ: ನಗರದಲ್ಲಿನ ಸರ್.ಎಂ. ವಿಶ್ವೇಶ್ವರಯ್ಯ ಜಿಲ್ಲಾ ಕ್ರೀಡಾಂಗಣಕ್ಕೆ ಮೂಲ ಸೌಕರ್ಯ ಕಲ್ಪಿಸಲು ಬದ್ಧ ಎಂದು ಜಿಪಂ ಅಧ್ಯಕ್ಷ ತೂಪಲ್ಲಿ ನಾರಾಯಣಸ್ವಾಮಿ ಭರವಸೆ ನೀಡಿದರು.
ಯುವ ಸಬಲೀಕರಣ, ಕ್ರೀಡಾ ಇಲಾಖೆ ಮತ್ತು ಜಿಲ್ಲಾ ಅಥ್ಲೆಟಿಕ್ಸ್ ಸಂಸ್ಥೆ ಜಂಟಿಯಾಗಿ ಅಥ್ಲೆಟಿಕ್ಸ್ ಮತ್ತು ಬಾಡಿ ಫಿಟ್ನೆಸ್ ತರಬೇತಿ ಉಚಿತ ಶಿಬಿರದ ಮುಕ್ತಾಯ ಸಮಾರಂಭದಲ್ಲಿ ಶಿಬಿರಾರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸಿ ಮಾತನಾಡುತ್ತಿದ್ದರು. ಬೆಂಗಳೂರು ಮತ್ತಿತರ ದೊಡ್ಡ ನಗರಗಳಲ್ಲಿ ಕ್ರೀಡಾ ತರಬೇತಿಗಾಗಿ ಹಣ ನೀಡಿ ಕಲಿಯಬೇಕಾಗುತ್ತದೆ. ಆದರೆ, ಕೋಲಾರದಲ್ಲಿ ಉಚಿತ ಶಿಬಿರ ನಡೆಸುವ ಮೂಲಕ ಕ್ರೀಡಾ ಇಲಾಖೆ ಹಾಗೂ ಜಿಲ್ಲಾ ಅಥ್ಲೆಟಿಕ್ ಸಂಸ್ಥೆ ಉತ್ತಮ ಕಾರ್ಯ ಮಾಡಿದೆ ಎಂದು ಶ್ಲಾಘಿಸಿದರು.
ಜಿಪಂನಿಂದ ಕ್ರೀಡಾಂಗಣದ ಅಭಿವೃದ್ಧಿಗೆ ಬೇಕಾದ ಅಗತ್ಯ ನೆರವು ನೀಡಲಾಗುತ್ತದೆ, ಅಧಿಕಾರಿಗಳು ಆಸಕ್ತಿ ವಹಿಸಿ ಕೆಲಸ ಮಾಡಿ ಕ್ರೀಡಾ ಕ್ಷೇತ್ರದಲ್ಲಿ ಕೋಲಾರ ಜಿಲ್ಲೆಗೆ ಕೀರ್ತಿ ಬರುವಂತೆ ಮಾಡಬೇಕೆಂದರು. ನಗರಸಭಾ ಅಧ್ಯಕ್ಷ ಮುಬಾರಕ್ ಮಾತನಾಡಿ, ಅನೇಕ ವರ್ಷಗಳಿಂದ ಕ್ರೀಡಾಪಟುಗಳಿಗೆ ವೈಜ್ಞಾನಿಕವಾಗಿ ತರಬೇತಿಯಿಲ್ಲದೆ ಸಾಧನೆ ಕುಂಠಿತವಾಗಿದೆ. ಕ್ರೀಡಾಂಗಳದಲ್ಲಿ ದೀಪ, ಶೌಚಾಲಯ, ನೀರಿನ ವ್ಯವಸ್ಥೆ ಕಲ್ಪಿಸಲು ನಗರಸಭೆ ಸಹ ಕೈಜೋಡಿಸುತ್ತದೆ. ಆದರೆ, ಅಧಿಕಾರಿಗಳು ಜವಾಬ್ದಾರಿಯಿಂದ ತಮ್ಮ ಕರ್ತವ್ಯ ನಿರ್ವಹಿಸಬೇಕಾಗಿದೆ ಎಂದರು.
ಅಥ್ಲೆಟಿಕ್ ಅಸೋಷೀಯೆಶನ್ ಕಾರ್ಯದರ್ಶಿ ಕೆ. ಜಯದೇವ್ ಮಾತನಾಡಿದರು. ಕರ್ನಾಟಕ ರಾಜ್ಯ ಅಥ್ಲೇಟಿಕ್ ಸಂಸ್ಥೆ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ್ ರೈ, ರಾಜ್ಯ, ರಾಷ್ಟ್ರ, ಅಂತಾರಾಷ್ಟ್ರಿಯ ಮಟ್ಟದಲ್ಲಿ ಕೀರ್ತಿ ತರುತ್ತಿರುವವರು ಮಧ್ಯಮ ವರ್ಗದ ಕುಟುಂಬಗಳಿಂದ ಬರುತ್ತಿರುವವರಾಗಿದ್ದಾರೆ. ಕೋಲಾರ ಜಿಲ್ಲೆಯ ಮಾಲೂರು ಮಂಜುಳ ಅಂತಾರಾಷ್ಟ್ರಿಯ ಮಟ್ಟದಲ್ಲಿ ಖ್ಯಾತಿಯನ್ನು ಪಡೆದು ಕ್ರೀಡಾ ಕೋಟಾದಲ್ಲಿ ರೈಲ್ವೆ ಇಲಾಖೆಯಲ್ಲಿ ಕೆಲಸ ಮಾಡುತ್ತಿದಾರೆ ಎಂದರು.
ಉಪ ವಿಭಾಗ ಅಧಿಕಾರಿ ಸಿ.ಎನ್. ಮಂಜುನಾಥ್, ತರಬೇತಿ ಶಿಬಿರದಲ್ಲಿ ಭಾಗವಹಿಸುತ್ತಿರುವ ಎಲ್ಲಾ ಕ್ರೀಡಾಪಟುಗಳು ಶಿಬಿರದ ಲಾಭ ಪಡೆದು ಆರೋಗ್ಯವಂತರಾಗಬೇಕು, ಜೊತೆಗೆ ಕ್ರೀಡೆ ಮತ್ತು ಶಿಕ್ಷಣ ಇದ್ದರೆ ಕ್ರೀಡಾಪಟುಗಳು ಸಮಾಜದ ಮುಖ್ಯವಾಹಿನಿಯಲ್ಲಿ ಜೀವಿಸಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.
ಯುವ ಸಬಲೀಕರಣ ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಬಿ. ರುದ್ರಪ್ಪ ಅಧ್ಯಕ್ಷತೆ ವಹಿಸಿದ್ದರು. ತರೇತುದಾರ ಪಿ.ಎಲ್. ಶಂಕರಪ್ಪ, ಸಂಸ್ಥೆಯ ಅಧ್ಯಕ್ಷ ಜಗನ್ನಾಥ್, ಜಂಟಿ ಕಾರ್ಯದರ್ಶಿ ಗೌಸ್ ಖಾನ್, ಹಿರಿಯ ಕ್ರೀಡಾಪಟು ವಿ. ಮಾರಪ್ಪ ಇದ್ದರು.