ಬರ ಪರಿಹಾರಕ್ಕೆ ಹಣದ ತೊಂದರೆಯಿಲ್ಲ
ಕನ್ನಡಪ್ರಭ ವಾರ್ತೆ, ಚಿಕ್ಕಬಳ್ಳಾಪುರ, ಮೇ 22
ಸರ್ಕಾರ ಸಮರ್ಪಕ ರೀತಿಯಲ್ಲಿ ಪರಿಹಾರ ಕಾರ್ಯಗಳನ್ನು ಕೈಗೊಂಡು ರಾಜ್ಯದಲ್ಲಿ ಕಾಡುತ್ತಿರುವ ಬರವನ್ನು ಸಮರ್ಥವಾಗಿ ಎದುರಿಸುತ್ತಿದೆ ಎಂದು ರಾಜ್ಯ ಸರ್ಕಾರದ ಪ್ರಧಾನ ಕಾರ್ಯದರ್ಶಿ ಕೌಶಿಕ್ ಮುಖರ್ಜಿ ತಿಳಿಸಿದರು.
ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಧಿಕಾರಿಗಳು ರಾಜ್ಯದಲ್ಲಿನ ಬರವನ್ನು ಗಂಭೀರವಾಗಿ ತೆಗೆದುಕೊಂಡು ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಈ ವಿಷಯದಲ್ಲಿ ತಮಗೆ ತೃಪ್ತಿಯಾಗಿದೆ ಎಂದರು.
ಬರ ಪರಿಹಾರ ಕಾರ್ಯಕ್ರಮಗಳನ್ನು ಕೈಗೊಳ್ಳಲು ಹಣಕಾಸಿನ ಯಾವುದೇ ತೊಂದರೆಯಿಲ್ಲ. ಇದಕ್ಕಾಗೇ 250 ಕೋಟಿ ಮೀಸಲಿಟ್ಟಿದ್ದು ಸರ್ಕಾರ ಅಗತ್ಯವಿರುವ ಹಣವನ್ನು ಎಲ್ಲಾ ಜಿಲ್ಲೆಗಳಿಗೂ ಬಿಡುಗಡೆ ಮಾಡುತ್ತಿದೆ. ಈಗ ಪ್ರತಿ ಜಿಲ್ಲಾಧಿಕಾರಿಗಳ ಬಳಿ ತಲಾ 8 ರಿಂದ 9 ಕೋಟಿ ರು. ಇದೆ. ಈ ಹಣವನ್ನು ತುರ್ತಾಗಿ ಬಳಕೆ ಮಾಡಿಕೊಳ್ಳಲು ತಿಳಿಸಲಾಗಿದೆ ಎಂದ ಅವರು, ಯಾವುದೇ ಜಿಲ್ಲೆಯಲ್ಲಿ ದೂರುಗಳು ಕೇಳಿ ಬಂದರೆ ಸಂಬಂಧಪಟ್ಟ ಜಿಲ್ಲಾಧಿಕಾರಿಗಳನ್ನು ಹೊಣೆಗಾರರನ್ನಾಗಿ ಮಾಡಲಾಗುತ್ತದೆ ಎಂದರು.
ಹಣವನ್ನು ಬಿಡುಗಡೆ ಮಾಡಿದ ತಕ್ಷಣ ಸಮಸ್ಯೆಗಳು ಪರಿಹಾರವಾಗುವುದಿಲ್ಲ. ಹಣವಿದ್ದರೂ ಮಳೆ ಬಾರದಿದ್ದರೆ ಏನೂ ಮಾಡಲು ಸಾಧ್ಯವಾಗುವುದಿಲ್ಲ. ಹೆಚ್ಚಿಗೆ ಕೊಳವೆ ಬಾವಿಗಳು ವಿಫಲವಾಗುತ್ತಿರುವಾಗ ಕುಡಿಯುವ ನೀರಿನ ಸಮಸ್ಯೆಯನ್ನು ಬಗೆಹರಿಸಲು ತೊಂದರೆಯಾಗುತ್ತಿದೆ ಎಂದ ಅವರು, ಈ ಬಾರಿ ಮುಂಗಾರು ಮಳೆ ಉತ್ತಮವಾಗಿ ಬೀಳುತ್ತದೆ ಆಶಾ ಭಾವನೆಯನ್ನು ಎಲ್ಲರು ಹೊಂದಿದ್ದು ಸ್ವತಃ ತಾವೇ ದೇವರ ಮೊರೆ ಹೋಗಿ ಮಳೆಗಾಗಿ ಪ್ರಾರ್ಥಿಸುತ್ತಿರುವುದಾಗಿ ತಿಳಿಸಿದರು. ಇತ್ತೀಚೆಗೆ ಆಲಿಕಲ್ಲು ಮಳೆ ಬಿದ್ದ ಪರಿಣಾಮ ಉಂಟಾದ ಬೆಳೆ ನಷ್ಟಕ್ಕೆ ಪರಿಹಾರ ನೀಡಲು 80 ಕೋಟಿ ರು.ಗಳನ್ನು ಬಿಡುಗಡೆ ಮಾಡಲಾಗಿದೆ. ಕೇಂದ್ರದಿಂದಲೂ ಆರ್ಥಿಕ ನೆರವು ಸಿಗುತ್ತಿದೆ. ಇನ್ನೂ ಕೇಂದ್ರದಲ್ಲಿ ಹೊಸ ಸರ್ಕಾರ ಆಡಳಿತಕ್ಕೆ ಬರುತ್ತಿರುವುದರಿಂದ ನಮ್ಮ ರಾಜ್ಯಕ್ಕೆ ಸಂಬಂಧಿಸಿದಂತೆ ನೆರೆಹೊರೆ ರಾಜ್ಯಗಳೊಂದಿಗೆ ನೀರಾವರಿ ಯೋಜನೆಗಳ ಜೊತೆಗೆ ಇತರೆ ವಿಷಯಗಳಲ್ಲಿ ಹೊಸ ವ್ಯತ್ಯಾಸಗಳು ಕಾಣುತ್ತವೆ ಎಂಬ ಆತಂಕ ಇಲ್ಲ ಎಂದರು.
ಜಿಲ್ಲೆಯಲ್ಲಿ ಅಂತರ್ಜಲ ಮಟ್ಟ ತೀವ್ರ ಕುಸಿದಿದೆ.1200 ಅಡಿ ಅಳಕ್ಕೆ ಕೊಳವೆ ಬಾವಿಯನ್ನು ಕೊರೆಸಿದರೂ ನೀರು ಸಿಗುತ್ತಿಲ್ಲ ಎನ್ನುವುದು ನನ್ನ ಗಮನಕ್ಕೆ ಬಂದಿದೆ. ಇದಕ್ಕೆ ಪರ್ಯಾಯ ಕ್ರಮಗಳನ್ನು ಕೈಗೊಳ್ಳಲು, ನಗರ ಮತ್ತು ಪಟ್ಟಣ ಪ್ರದೇಶಗಳು ವ್ಯವಸ್ಥಿತ ರೀತಿಯಲ್ಲಿ ಅಭಿವೃದ್ಧಿ ಕಾಣುವಂತೆ ಮಾಡಲು ಶ್ರಮಿಸಲು ಸೂಚಿಸಿದ್ದೇನೆ ಎಂದ ಅವರು, ಅವೈಜ್ಞಾನಿಕವಾಗಿ ನಗರ, ಪಟ್ಟಣ ಪ್ರದೇಶಗಳು ಬೆಳೆಯದಂತೆ ನೋಡಿಕೊಳ್ಳಬೇಕು.
ಒಳಚರಂಡಿ ವ್ಯವಸ್ಥೆ, ಸೂಕ್ತ ಕುಡಿಯುವ ನೀರಿನ ಸರಬರಾಜಿಗೆ ಪೈಪ್‌ಲೈನ್ ವ್ಯವಸ್ಥೆ ಹೊಂದಿಲ್ಲದ ಕಡೆ ಮನೆಗಳನ್ನು ನಿರ್ಮಾಣ ಮಾಡಲು ಅನುಮತಿ ನೀಡಬಾರದು. ಇದರಿಂದ ಜನರು ಮೂಲ ಸೌಲಭ್ಯಗಳಿಂದ ವಂಚಿತರಾಗುವುದು ತಪ್ಪುತ್ತದೆ. ಅಲ್ಲದೇ ಸರ್ಕಾರದ ಮೇಲೆ ಒತ್ತಡ ಕಡಿಮೆಯಾಗುತ್ತದೆ ಎಂದರು. ಪತ್ರಿಕಾಗೋಷ್ಠಿಯಲ್ಲಿ ಚಿಕ್ಕಬಳ್ಳಾಪುರ ಡಿಸಿ ಡಾ.ಆರ್ ವಿಶಾಲ್, ಜಿ.ಪಂ. ಸಿಇಓ ನೀಲಾ ಮಂಜುನಾಥ್, ಕೋಲಾರ ಡಿಸಿ ಡಿ.ಕೆ. ರವಿ, ಬೆಂಗಳೂರು ಪ್ರಾದೇಶಿಕ ಆಯುಕ್ತ ಗೌರವ್ ಗುಪ್ತಾ ಉಪಸ್ಥಿತರಿದ್ದರು.