ಜೂ.30ರೊಳಗೆ ಟೇಕಲ್ ರಸ್ತೆ ಕಾಮಗಾರಿ ಮುಕ್ತಾಯ
ಕೋಲಾರ: ನಗರದ ಟೇಕಲ್ ರಸ್ತೆಯ ಅಗಲೀಕರಣ ಕಾಮಗಾರಿ ವಿಳಂಬವಾಗಿರುವುದಕ್ಕೆ ನಗರಸಭೆ ಸದಸ್ಯರು ಹಾಗೂ ಸಾರ್ವಜನಿಕರು ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಘಟನೆ ಶುಕ್ರವಾರ ನಡೆಯಿತು.
ಟೇಕಲ್ ರಸ್ತೆ ಕಾಮಗಾರಿ ವಿಳಂಬದ ಬಗ್ಗೆ ಜನತೆ ಆಕ್ರೋಶ ವ್ಯಕ್ತಪಡಿಸಿರುವ ಹಿನ್ನಲೆಯಲ್ಲಿ ಕರೆಯಲಾಗಿದ್ದ ಸಭೆಯಲ್ಲಿ ಭಾಗವಹಿಸಿದ್ದ ಲೋಕೋಪಯೋಗಿ ಇಲಾಖೆಯ ಪರವಾನಗಿ ಹೊಂದಿರುವ ಗುತ್ತಿಗೆದಾರರೂ ಆದ ವಿಸಿ ಬಡಾವಣೆಯ ನಿವಾಸಿ ರವಿಕುಮಾರ್ ಅವರು, ಕಾಮಗಾರಿ ವಿಳಂಬದಿಂದ ಜನತೆ ಧೂಳು ಕುಡಿಯುವಂತಾಗಿದೆ. ಅನೇಕರು ರೋಗಗ್ರಸ್ತರಾಗಿದ್ದಾರೆಂದು ಸಿಡಿಮಿಡಿಗೊಂಡರು.
ಕಾಮಗಾರಿ ವಹಿಸಿಕೊಂಡಿರುವ ಗುತ್ತಿಗೆದಾರ ವೆಂಕಟರಾಮರೆಡ್ಡಿ ಅವರು ಏಕೆ ಕೆಲಸ ವಿಳಂಬ ಮಾಡುತ್ತಿದ್ದಾರೆಂದು ತಿಳಿಯುತ್ತಿಲ್ಲ. ನಿಮ್ಮಿಂದ ಏನಾದರೂ ಸೂಚನೆಗಳು ಇದ್ದರೆ ತಿಳಿಸಿ ಎಂದು ಲೋಕೋಪಯೋಗಿ ಇಲಾಖೆಯ ಕಾರ್ಯಪಾಲಕ ಅಭಿಯಂತರ ಮುನಿಆಂಜನಪ್ಪನವರನ್ನು ಆಗ್ರಹಿಸಿದರು. ರಸ್ತೆಯನ್ನು ಅಗೆಯುವ ಭರಾಟೆಯಲ್ಲಿ ಅನೇಕ ಕಡೆ ನೀರು ಸರಬರಾಜು ಪೈಪುಗಳನ್ನು ನಾಶ ಮಾಡಲಾಗಿದೆ. ದೂರವಾಣಿ ಕೇಬಲ್ಗಳು ಹಾಳಾಗಿವೆ. ಕೆಲವು ಕಡೆ ಚರಂಡಿ ನಿರ್ಮಾಣ ವಿಳಂಬವಾಗಿರುವುದರಿಂದ ಜನರು ನೆಮ್ಮದಿಯಿಂದ ಮನೆಯಾಚೆಯಿಂದ ಹೊರ ಬಂದು ತಮ್ಮ ದೈನಂದಿನ ಕೆಲಸಗಳ ಕಡೆ ಗಮನ ಹರಿಸಲು ಆಗುತ್ತಿಲ್ಲವೆಂದು ದೂರಿದರು. ಗುತ್ತಿಗೆದಾರ ರವಿಕುಮಾರ್ ಅವರ ಬೆಂಬಲಕ್ಕೆ ನಿಂತ 12ನೇ ವಾರ್ಡಿನ ಸದಸ್ಯ ರವೀಂದ್ರ, ಜನರಿಗೆ ತೊಂದರೆ ನೀಡುವುದಕ್ಕಾಗಿಯೇ ಕಾಮಗಾರಿ ವಿಳಂಬ ಮಾಡಲಾಗುತ್ತಿದೆ ಎಂದು ಆರೋಪಿಸಿದರು. ಜೂನ್ 30ರೊಳಗೆ ಕಾಮಗಾರಿ ಮುಗಿಸದಿದ್ದರೆ ಜನರೊಟ್ಟಿಗೆ ಸೇರಿ ಅನಿರ್ದಿಷ್ಟಕಾಲ ಮುಷ್ಕರ ನಡೆಸಬೇಕಾಗುತ್ತದೆ, ಜನರಿಗೆ ಆಗುವ ತೊಂದರೆಗೆ ನೀವೇ ಹೊಣೆ ಎಂದು ಎಚ್ಚರಿಕೆ ನೀಡಿದರು.
ಸಭೆಯಲ್ಲಿ ಕೇಳಿ ಬಂದ ಅಭಿಪ್ರಾಯ, ಟೀಕೆಗಳಿಗೆ ಉತ್ತರಿಸಿದ ಇಇ ಮುನಿಆಂಜನಪ್ಪ, ಗುತ್ತಿಗೆದಾರ ಸಭೆ ಆರಂಭಕ್ಕೆ ಮುನ್ನ ಬಂದು ಜೂನ್ 30ರೊಳಗೆ ಕಾಮಗಾರಿ ಮುಗಿಸಿಕೊಡುವುದಾಗಿ ತಿಳಿಸಿದ್ದಾರೆ. ಒಂದು ವೇಳೆ ಮಾತು ತಪ್ಪಿದರೆ ದಂಡ ವಿಧಿಸಿ ಬೇರೆಯವರಿಗೆ ಕೆಲಸ ವಹಿಸುವುದಾಗಿ ಎಚ್ಚರಿಕೆ ನೀಡಲಾಗಿದೆ. ಚರಂಡಿ ಕೆಲಸವನ್ನು ಅದಷ್ಟು ಬೇಗನೆ ಮುಗಿಸಿ ರಸ್ತೆ ಕಾಮಗಾರಿಯನ್ನು ಮುಗಿಸಿಕೊಡುವಂತೆ ತಿಳಿಸಿದ್ದೇನೆಂದು ತಿಳಿಸಿದರು. ಸಭೆಯಲ್ಲಿ 13ನೇ ವಾರ್ಡಿನ ನಗರಸಭೆ ಸದಸ್ಯ ರಾಧಾಕೃಷ್ಣ, ಹೆದ್ದಾರಿ ಪ್ರಾಧಿಕಾರದ ಮುಖ್ಯ ಎಂಜನಿಯರ್ ಶ್ರೀಧರ್ ಇದ್ದರು.