ಬೆಸ್ಕಾಂ ಬೇಕಾಬಿಟ್ಟಿ ಬಿಲ್ಗೆ ಗ್ರಾಹಕ ತತ್ತರ!
ಬಂಗಾರಪೇಟೆ: ಬೆಸ್ಕಾಂ ಇಲಾಖೆ ಗ್ರಾಹಕರ ಸಮಸ್ಯೆಗಳಿಗೆ ತಕ್ಕಂತೆ ಸ್ಪಂದಿಸುವುದೋ ಇಲ್ಲವೋ, ಆದರೆ ಮನೆ ಬಳಕೆ ವಿದ್ಯುತ್ಗೆ ಹೆಚ್ಚಿಗೆ ಬಿಲ್ ನೀಡುತ್ತಿರುವುದು ಗ್ರಾಹಕರ ಅಸಮಾಧಾಲಕ್ಕೆ ಕಾರಣವಾಗಿದೆ.
ಪಟ್ಟಣದ ವಿವೇಕಾನಂದ ನಗರದ ಬೆಮಲ್ ಉದ್ಯೋಗಿ ಲಕ್ಷ್ಮೀಪತಿ ಎಂಬುವರ ನೂತನ ಮನೆಗೆ ಬೆಸ್ಕಾಂ ನೀಡಿರುವ ಬಿಲ್ ಎಷ್ಟು ಗೊತ್ತಾ? 24,348 ರು. ಗಳು!
ಮನೆ ಮಾಲೀಕ ಇಲಾಖೆ ಎಇಇ ಲೀಲಾವತಿ ಅವರನ್ನು ಸಂಪರ್ಕಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಕಳೆದ ಆರು ತಿಂಗಳಿಂದ ಮೀಟರ್ನಲ್ಲಿ ದೋಷವಿದೆ ಮೀಟರ್ ಬದಲಾಯಿಸಿ ಎಂದು ಕೋರಿದ್ದರೂ, ನಮ್ಮಲ್ಲಿ ಮೀಟರ್ ಸ್ಸ್ಟಾಕಿಲ್ಲ ಬಂದ ಮೇಲೆ ನೋಡೋಣ ಬಿಲ್ ಪಾವತಿ ಮಾಡಿ ನಂತರ ತನಿಖೆ ಮಾಡಿ ಸರಿಪಡಿಸುವೆವು... ಹೀಗೆ ಬೇಜವಾಬ್ದಾರಿ ಹೇಳಿಕೆ ನೀಡುತ್ತಾ ಕಾಲಹರಣ ಮಾಡುತ್ತಿದ್ದಾರೆಂಬುದು ಲಕ್ಷ್ಮೀಪತಿ ಆರೋಪ.
ಇಲಾಖೆಯ ಬಗ್ಗೆ ವ್ಯಾಪಕ ದೂರುಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಈ ಹಿಂದಿನ ಸರ್ಕಾರದಲ್ಲಿ ಇಂಧನ ಸಚಿವರಾಗಿದ್ದ ಶೋಭಾ ಕರಂದ್ಲಾಜೆ ಪ್ರತಿ ತಿಂಗಳು ಇಲಾಖೆ ಕಚೇರಿಯಲ್ಲಿ ಗ್ರಾಹಕರ ಸಂವಾದ ಸಭೆಯನ್ನು ಕಡ್ಡಾಯವಾಗಿ ನಡೆಸುವಂತೆ ಆದೇಶ ನೀಡಿದ್ದರು. ಪ್ರಾರಂಭದಲ್ಲಿ ಯಶಸ್ವಿಯಾಗಿ ನಡೆಯಿತಾದರೂ ನಂತರ ಪ್ರಚಾರದ ಕೊರತೆಯಿಂದ ಕಾರ್ಯಕ್ರಮ ನೆನೆಗುದಿಗೆ ಬಿದ್ದಿದೆ.