ರಸ್ತೆ ಇಕ್ಕೆಲಗಳ ಅಂಗಡಿಗಳ ತೆರವು
ಬಾಗೇಪಲ್ಲಿ: ಪಟ್ಟಣದ ಮಟನ್ ಮಾರುಕಟ್ಟೆ ರಸ್ತೆಯ ಎರಡು ಬದಿಗಳಲ್ಲಿ ಅಂಗಡಿಗಳ ಮಾಲೀಕರು ಅಕ್ರಮವಾಗಿ ಚರಂಡಿ ಒತ್ತುವರಿ ಮಾಡಿಕೊಂಡಿರುವುದನ್ನು ಪತ್ತೆ ಹಚ್ಚಿ ಪುರಸಭೆ ಸದಸ್ಯರ ಸಹಕಾರದಿಂದ ಪುರಸಭೆಯ ಮುಖ್ಯಾಧಿಕಾರಿ ಆರ್. ಶ್ರೀಕಾಂತ್ ಮಳಿಗೆಗಳ ಮಾಲೀಕರ ಪ್ರತಿರೋಧದ ನಡುವೆಯೂ ತೆರವುಗೊಳಿಸಿದರು.
ಮುಖ್ಯಮಂತ್ರಿಗಳ ನಗರೋತ್ಥಾನ ಯೋಜನೆಯಡಿಯಲ್ಲಿ ಹೊಸ ಸಿಮೆಂಟ್ ಚರಂಡಿ ಕಾಮಗಾರಿ ಚಾಲನೆಯಲ್ಲಿದೆ. ಕಾಮಗಾರಿ ಪ್ರಾರಂಭವಾದಾಗ ಚರಂಡಿ ಒತ್ತುವರಿ ಪ್ರಕರಣ ಬೆಳಕಿಗೆ ಬಂದಿದೆ. ಅಕ್ರಮವಾಗಿ ಒತ್ತುವರಿ ಮಾಡಿದ್ದ ಚರಂಡಿ ತೆರವುಗೊಳಿಸಲು ಹೋದಾಗ ಹಲವು ಅಂಗಡಿಗಳ ಮಾಲೀಕರು ಪ್ರತಿರೋಧ ವ್ಯಕ್ತಪಡಿಸಿದರು.
ಆದರೂ ಸಾರ್ವಜನಿಕರ ಹಿತದೃಷ್ಟಿಯಿಂದ ಮುಖ್ಯಾಧಿಕಾರಿಗಳ ಬೆಂಬಲಕ್ಕೆ ನಿಂತು ತೆರವುಗೊಳಿಸಿದರು.
ಚರಂಡಿ ಕಾಮಗಾರಿಗೆ ಕಂಬಿಯನ್ನು ಬಳಸುವಾಗ 6 ಇಂಚಿಗೆ ಒಂದು ಕಂಬಿ ಪ್ರಕಾರ ಬಳಸಿ ಭದ್ರವಾಗಿ ಸಿಮೆಂಟ್ ಚರಂಡಿ ನಿರ್ಮಾಣ ಮಾಡಬೇಕಾಗಿದೆ. ಆದರೆ ಗುತ್ತಿಗೆದಾರರು 8,9 ಇಂಚಿಗೆ ಒಂದರಂತೆ ಕಂಬಿ ಹಾಕಿ ಚರಂಡಿ ನಿರ್ಮಾಣ ಮಾಡುತ್ತಿದ್ದಾರೆ ಎಂದು ಸಾರ್ವಜನಿಕರು ಆರೋಪಿಸಿದರು. ತಕ್ಷಣ ಈ ಬಗ್ಗೆ ಪರಿಶೀಲನೆ ಮಾಡಿದ ಮುಖ್ಯಾಧಿಕಾರಿಗಳು 8,9 ಇಂಚಿಗೆ ಹಾಕಿರುವ ಕಂಬಿಗಳನ್ನು ತೆಗಿಸಿ 6 ಇಂಚಿಗೆ ಒಂದು ಕಂಬಿಯನ್ನು ಹಾಕಿಸಿದರು. ಇನ್ನು ಮುಂದೆ ಇಂತಹ ಪ್ರಕರಣಗಳಿಗೆ ಅವಕಾಶ ನೀಡಬಾರದು ಎಂದು ಗುತ್ತಿಗೆದಾರರಿಗೆ ಎಚ್ಚರಿಕೆ ನೀಡಿದರು.