31ಕ್ಕೆ ಯೋಗಿನಾರೇಯಣ ತಾತಯ್ಯರ179ನೇ ಆರಾಧನಾ ಮಹೋತ್ಸವ
ಚಿಂತಾಮಣಿ: ತಾಲೂಕಿನ ಪ್ರಸಿದ್ಧ ಯಾತ್ರಾಸ್ಥಳ ಶ್ರೀ ಕ್ಷೇತ್ರ ಕೈವಾರದಲ್ಲಿ ತ್ರಿಕಾಲಜ್ಞಾನಿ ಸದ್ಗುರು ಶ್ರೀ ಯೋಗಿನಾರೇಯಣ ತಾತಯ್ಯನವರ 179 ನೇ ಆರಾಧನಾ ಮಹೋತ್ಸವವನ್ನು ಮೇ 31 ರಂದು ನಡೆಯಲಿದೆ ಎಂದು ಶ್ರೀ ಯೋಗಿನಾರೇಯಣ ಮಠದ ಧರ್ಮಾಧಿಕಾರಿ ಡಾ.ಎಂ.ಆರ್.ಜಯರಾಮು ತಿಳಿಸಿದ್ದಾರೆ. ಈ ಶುಭ ದಿನದಂದು ಸದ್ಗುರು ತಾತಯ್ಯನವರಿಗೆ ವಿಶೇಷ ಅಭಿಷೇಕ,ಅಷ್ಟವಧಾನ ಸೇವೆ, ಪೂಜಾ ಕೈಂಕರ್ಯಗಳನ್ನು ನೆರವೇರಿಸಲಾಗುತ್ತದೆ. ಸಮಾರಂಭದಲ್ಲಿ ಭಾಗವಹಿಸುವ ಎಲ್ಲಾ ಸಾಧು-ಸತ್ಪುರುಷರಿಗೆ ಕಾಷಾಯ ವಸ್ತ್ರವನ್ನು ಉಚಿತವಾಗಿ ನೀಡಲಾಗುತ್ತದೆ. ಸದ್ಗುರು ತಾತಯ್ಯನವರಿಗೆ ವಿಶೇಷ 2013-14 ನೇ ಸಾಲಿನ ವಾರ್ಷಿಕ ವರದಿಯನ್ನು ಸಮರ್ಪಿಸಲಾಗುತ್ತಿದೆ. ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಸಮುದ್ರಾಲ ಲಕ್ಷ್ಮಯ್ಯರವರು ಭಾಗವಹಿಸಿ ಉಪನ್ಯಾಸವನ್ನು ನೀಡಲಿದ್ದಾರೆ.
ಸಾಮೂಹಿಕ ವಿವಾಹಗಳು: ಜೂನ್ 1ರಂದು ಉಚಿತ ಸಾಮೂಹಿಕ ವಿವಾಹಗಳನ್ನು ಏರ್ಪಡಿಸಲಾಗಿದೆ. ವಧು-ವರರು ತಮ್ಮ ಹೆಸರುಗಳನ್ನು ಮಠದ ಕಚೇರಿಯಲ್ಲಿ ನೋಂದಾಯಿಸಬಹುದು. ನಿಗದಿತ ಅರ್ಜಿ ನಮೂನೆಗಳನ್ನು ಮಠದ ಕಚೇರಿಯಿಂದ ಪಡೆಯಬಹುದು ಎಂದು ಧರ್ಮಾಧಿಕಾರಿ ತಿಳಿಸಿದ್ದಾರೆ.