ಕುಡಿಯುವ ನೀರಿನ ಸಮಸ್ಯೆ: ಪುರಸಭೆ ವಿರುದ್ಧ ಪ್ರತಿಭಟನೆ
ಮಾಲೂರು: ಕಳೆದ ಆರು ತಿಂಗಳಿಂದ ಕುಡಿಯುವ ನೀರಿನ ಸಮಸ್ಯೆ ಎದುರಾಗಿದ್ದರೂ, ಇದುವರೆಗೂ ಸ್ವಂದಿಸದ ಇಲ್ಲಿನ ಪುರಸಭೆಯ ಕಾರ್ಯವೈಖರಿ ಖಂಡಿಸಿ ಪಟ್ಟಣದ 20 ನೇ ವಾರ್ಡ್ ನಿವಾಸಿಗಳು ಶನಿವಾರ ಪುರಸಭೆಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದರು. ಪ್ರತಿಭಟನೆ ನೇತೃತ್ವ ವಹಿಸಿದ್ದ ತ್ಯಾವನಹಳ್ಳಿ ಡಾ. ಗೋಪಾಲ್ ಗೌಡ, ನೀರಿಲ್ಲದೇ ಕಳೆದ ಒಂದು ವರ್ಷದಿಂದ ತೀವ್ರ ತೊಂದರೆ ಆಗುತ್ತಿರುವ ಬಗ್ಗೆ ಹಲವು ಸಲ ಮನವಿ ಮಾಡಿದ್ದರೂ, ಯಾವುದಕ್ಕೂಪುರಸಭೆ ಅಧಿಕಾರಿಗಳು ಸ್ಪಂದಿಸಿಲ್ಲ. ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡುವುದಾಗಿ ಸುಳ್ಳು ಭರವಸೆ ನೀಡುತ್ತಿದ್ದು, ವಾರ್ಡ್ ನಿವಾಸಿಗಳ ತಾಳ್ಮೆ ಪರೀಕ್ಷಿಸುತ್ತಿದ್ದಾರೆ ಎಂದು ಅಪಾದಿಸಿದರು. ವಾರ್ಡ್ ಸದಸ್ಯೆ ರೇಖಾ ಸುಬ್ರಮಣ್ಯ ಮಾತನಾಡಿದರು.
ಪುರಸಭೆ ಅಧ್ಯಕ್ಷೆ ಭಾರತಮ್ಮ ನಂಜುಂಡಪ್ಪ, ಮುಖ್ಯಾಧಿಕಾರಿ ರೇಣುಕಾ ಹಾಗೂ ಎಸ್‌ಐ ದಯಾನಂದ್ ಮಧ್ಯ ಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಿದರು. ಸರ್ಕಾರಿ ನೌಕರರ ಸಂಘದ ಮಾಜಿ ಅಧ್ಯಕ್ಷ ಆಂಜಿನಪ್ಪ, ಕೆಂಪಣ್ಣ, ಪ್ರಸನ್ನ ಕುಮಾರ್, ವಕೀಲ ಆನಂದ್ ಮಾತನಾಡಿದರು. ಮುಂದಿನ ಸೋಮವಾರದಿಂದ ವಾರ್ಡ್‌ಗೆ ಪ್ರತಿ ಮೂರು ದಿನಕ್ಕೂಮ್ಮೆ ಅರ್ಧ ಗಂಟೆ ನೀರು ಬಿಡುವ ವ್ಯವಸ್ಥೆ ಮಾಡುವುದಾಗಿ ತಿಳಿಸಿ, ಪುರಸಭೆ ಮುಖ್ಯಾಧಿಕಾರಿ ಮೂರು ದಿನಗಳ ಕಾಲವಕಾಶ ಕೇಳಿದ ಬಳಿಕ ಪ್ರತಿಭಟನೆ ಹಿಂತೆಗೆದುಕೊಳ್ಳಲಾಯಿತು.