ನಗರಸಭೆ ಸದಸ್ಯ- ಆರೋಗ್ಯ ನಿರೀಕ್ಷಕ ಜಟಾಪಟಿ
ಕ.ಪ್ರ.ವಾರ್ತೆ, ಕೋಲಾರ, ಮೇ 24
ನಗರಸಭೆ ಸದಸ್ಯ ಹಾಗೂ ಆರೋಗ್ಯ ನಿರೀಕ್ಷಕರ ನಡುವೆ 5ನೇ ವಾರ್ಡಿನ ಸಮಸ್ಯೆಗೆ ಸಂಬಂಧಿಸಿದಂತೆ ಉಂಟಾದ ಜಟಾಪಟಿ ಪ್ರತಿಭಟನೆಗೆ ತಿರುಗಿ ಅಧ್ಯಕ್ಷರ ಮಧ್ಯ ಪ್ರವೇಶದಿಂದ ರಾಜಿಯಾದ ಪ್ರಸಂಗ ಶನಿವಾರ ನಗರಸಭೆಯಲ್ಲಿ ನಡೆಯಿತು.
5ನೇ ವಾರ್ಡಿನಲ್ಲಿ ಕಳೆದ ನಾಲ್ಕೈದು ದಿನಗಳಿಂದ ಕಲುಷಿತ ನೀರು ಪೂರೈಕೆ ಆಗುತ್ತಿದೆ. ಏಳೆಂಟು ಜನ ಈ ನೀರು ಸೇವಿಸಿ ಆಸ್ಪತ್ರೆ ಸೇರಿದ್ದಾರೆ.
ಆರೋಗ್ಯ ನಿರೀಕ್ಷಕ ರಮೇಶ್ ಸಮಸ್ಯೆಗೆ ಸ್ಪಂದಿಸುತ್ತಿಲ್ಲವೆಂದು ಆಕ್ರೋಶಗೊಂಡ ಸದಸ್ಯ ಸೋಮಶೇಖರ್ ವಾರ್ಡಿನ ಜನರೊಂದಿಗೆ ಬಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಆರೋಗ್ಯ ನಿರೀಕ್ಷಕ ರಮೇಶ್ ಮತ್ತು ಸದಸ್ಯ ಸೋಮಶೇಖರ್ ನಡುವೆ ಮಾತಿನ ಚಕಮಕಿ ಉಂಟಾಗಿ, ಕೈ ಕೈ ಮೀಲಾಯಿಸುವ ಹಂತಕ್ಕೆ ಪರಿಸ್ಥಿತಿ ಮುಟ್ಟಿತು.
ಶಾಂತಿ ಇರಲಿ: ಏನೇ ಸಮಸ್ಯೆ ಬಂದರೂ ಶಾಂತಿಯಿಂದ ಬಗೆಹರಿಸಿಕೊಳ್ಳಬೇಕು. ಅಧಿಕಾರಿಗಳ ಮೇಲೆ ದೌರ್ಜನ್ಯ ಎಸಗುವುದರಿಂದ ಪರಿಹಾರ ಸಿಗಲ್ಲ. ಸಿಬ್ಬಂದಿ ಕೊರತೆ ಇರುವುದರಿಂದ ಎಲ್ಲಾ ಕೆಲಸಗಳು ಒಟ್ಟಿಗೆ ಮಾಡಲಾಗುತ್ತಿಲ್ಲವೆಂದು ಪ್ರತಿಭಟನಾಕಾರರು ಸೋಮಶೇಖರ್ ವಿರುದ್ಧ ಹರಿಹಾಯ್ದರು. ಈ ಸಂದರ್ಭದಲ್ಲಿ ಸದಸ್ಯ ಸೋಮಶೇಖರ್ ಪರವಾಗಿ ಬಂದಿದ್ದ 5ನೇ ವಾರ್ಡಿನ ಜನ ಸಿಬ್ಬಂದಿಯ ವಿರುದ್ಧ ಘೋಷಣೆ ಕೂಗಿ, ಪ್ರತಿಭಟಿಸಿದ್ದರಿಂದ ಪರಿಸ್ಥಿತಿ ಕೈ ಮೀರಿ ಸಂಘರ್ಷದ ವಾತಾವಣ ಸೃಷ್ಟಿಸಿತು.
ಪರಿಸ್ಥಿತಿ ಅರಿತ ನಗರಸಭೆ ಅಧ್ಯಕ್ಷ ಮುಬಾರಕ್ ಮತ್ತು ಕೆಲ ಸದಸ್ಯರು ಸೋಮಶೇಖರ್ ಅವರನ್ನು ಸಮಾಧಾನಪಡಿಸಿದರೆ, ಆಯುಕ್ತ ಜಗದೀಶ್ ತಮ್ಮ ಸಹದ್ಯೋಗಿ ರಮೇಶ್ ಅವರಿಗೆ ಸಾಂತ್ವನ ಹೇಳಿ ಅಧ್ಯಕ್ಷರ ಕೋಣೆಗೆ ಕರೆದುಕೊಂಡು ಹೋದರು.
ಆರೋಗ್ಯ ನಿರೀಕ್ಷಕರ ಮೇಲೆ ಹಲ್ಲೆ ನಡೆಸಿರುವ ಸೋಮಶೇಖರ್ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಸಿಬ್ಬಂದಿ ಆಗ್ರಹಿಸಿದರು. ರಾಜಿ ಸಂಧಾನಕ್ಕೆ ಹೋಗದಂತೆ ರಮೇಶ್ ಅವರನ್ನು ತಡೆದರಾದರೂ ಕಡೆಗೆ ಹಿರಿಯ ಅಧಿಕಾರಿಯ ಮಾತಿಗೆ ಮಣಿದರು.
ಅಧ್ಯಕ್ಷ ಮುಬಾರಕ್ ಅವರು ಸದಸ್ಯ ಸೋಮಶೇಖರ್ ಮತ್ತು ಆರೋಗ್ಯ ನಿರೀಕ್ಷಕ ರಮೇಶ್ ಅವರಿಂದ ಘಟನೆಯ ಬಗ್ಗೆ ಮಾಹಿತಿ ಪಡೆದು ಜನತೆಯ ಹಿತದೃಷ್ಟಿಯಿಂದ ಪ್ರತಿಭಟನೆ ನಿಲ್ಲಿಸಿ ಮಾತುಕತೆಯ ಮೂಲಕ ಸಮಸ್ಯೆ ನಿವಾರಣೆ ಮಾಡಿಕೊಳ್ಳಿ ಎಂದು ಇಬ್ಬರಿಗೂ ಬುದ್ಧಿವಾದ ಹೇಳಿದರು.
ಸುಮಾರು ಅರ್ಧ ಗಂಟೆಗೂ ಹೆಚ್ಚು ಕಾಲ ನಡೆದ ಮಾತುಕತೆಯಿಂದಾಗಿ ಇಬ್ಬರೂ ರಾಜಿ ಮಾಡಿಕೊಂಡ ನಂತರ ಪ್ರತಿಭಟನೆ ನಿಲ್ಲಿಸಲಾಯಿತು.
ಘಟನೆಯ ಬಗ್ಗೆ ಪತ್ರಕರ್ತರೊಂದಿಗೆ ಮಾತನಾಡಿದ ನಗರಸಭೆ ಅಧ್ಯಕ್ಷ ಬಿ.ಎಂ. ಮುಬಾರಕ್,ನಗರಸಭೆ ಒಂದು ಕುಟುಂಬವಿದ್ದಂತೆ, ಇಲ್ಲಿ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಸೇರಿ ಕೆಲಸ ಮಾಡಿದರೆ ಮಾತ್ರ ಜನರ ಸೇವೆ ಮಾಡಲು ಸಾಧ್ಯವೆಂದರು. ನಗರಸಭೆಯ 35 ವಾರ್ಡ್‌ಗಳಿಗೆ 6 ಜನ ಆರೋಗ್ಯ ನಿರೀಕ್ಷಕರು ಬೇಕು. ಆದರೆ, ಒಬ್ಬರಿದ್ದಾರೆ. ಅದೇ ರೀತಿ 4 ಜನ ಸಹಾಯಕ ಎಂಜನಿಯರ್‌ಗೆ ಒಬ್ಬರು ಕೆಲಸ ಮಾಡುತ್ತಿದ್ದು, ಸಹಾಯಕರು ಯಾರೊಬ್ಬರು ಇಲ್ಲ. ಈ ಬಗ್ಗೆ ಸ್ಥಳೀಯ ಶಾಸಕರಿಗೆ ಮತ್ತು ಜಿಲ್ಲಾ ಉಸ್ತುವಾರಿ ಸಚಿವರ ಗಮನಕ್ಕೆ ತಂದರೂ ಪರಿಹಾರ ಸಿಕ್ಕಿಲ್ಲವೆಂದರು.
ನಗರಸಭೆಯಲ್ಲಿ ಶೇ.50 ರಷ್ಟು ಸಿಬ್ಬಂದಿ ಕೊರತೆಯಿದ್ದು, ಸಂಬಂಧಪಟ್ಟ ಸಚಿವರಿಗೆ ಈಗಾಗಲೇ ಪ್ರಸ್ತಾವನೆಯನ್ನು ಕಳುಹಿಸಲಾಗಿದೆ ಎಂದು ಅವರು, ಸಿಬ್ಬಂದಿ ಕೊರತೆಯ ನಡುವೆ ಅಧಿಕಾರಿಗಳು ಕೆಲಸ ಮಾಡಿಕೊಂಡು ಹೋಗುತ್ತಿದ್ದಾರೆ ಎಂದರು.
ರಾಜಿ ಸಂಧಾನ ಸಭೆಯಲ್ಲಿ ಆಯುಕ್ತ ಜಗದೀಶ್, ಸದಸ್ಯರಾದ ರವೀಂದ್ರ, ಮುರಳಿಗೌಡ, ಗಾಂಧಿನಗರ ನಾರಾಯಣಸ್ವಾಮಿ, ಸಲ್ಲಾವುದ್ದೀನ್ ಬಾಬು ಮತ್ತಿತರರು ಇದ್ದರು.
ಕೆಲಸ ಸ್ಥಗಿತ: ಸಾರ್ವಜನಿಕರಿಗೆ ತೊಂದರೆ
ಸದಸ್ಯ ಸೋಮಶೇಖರ್ ತಮ್ಮ ಮೇಲೆ ಹಲ್ಲೆ ಮಾಡಿದ್ದಾರೆಂದು ಆರೋಗ್ಯ ನಿರೀಕ್ಷಕ ದೂರುತ್ತಿದ್ದಂತೆ ನಗರಸಭೆಯ ವಿವಿಧ ವಿಭಾಗದ ಅಧಿಕಾರಿಗಳು, ಸಿಬ್ಬಂದಿ ಕೆಲಸ ಸ್ಥಗತಗೊಳಿಸಿ ಗಾಂಧಿ ಪೋಟೋದೊಂದಿಗೆ ಧರಣಿ ಆರಂಭಿಸಿದ್ದರಿಂದ ಸಾರ್ವಜನಿಕರ ಕೆಲಸಕ್ಕೆ ತೊಂದರೆ ಉಂಟಾಯಿತು. ತಾವೇನು ಆರೋಗ್ಯ ನಿರೀಕ್ಷಕರ ಮೇಲೆ ಹಲ್ಲೆ ನಡೆಸಿಲ್ಲ, ಜನರ ಸಮಸ್ಯೆ ನಿವಾರಣೆ ಮಾಡಿಲ್ಲವೆಂದು ಕೋಪದಿಂದ ಬೈದಿರುವುದುಂಟು, ಮೊಬೈಲ್‌ನಿಗೂ ಸಿಗದೆ ಉದ್ಧಟತನ ಪ್ರದರ್ಶಿಸಿದ್ದಾರೆ. ಜನಪ್ರತಿನಿಧಿಗಳೆಂದರೆ ಕಸಕ್ಕಿಂತ ಕಡೆಯಾಗಿದೆ. ವಾರ್ಡಿಗೆ ಬಂದು ಸಮಸ್ಯೆ ಅಲಿಸಿದ್ದರೆ ನಾನು ಇಲ್ಲಿಗೆ ಬರುವ ಅವಶ್ಯಕತೆ ಇರುತ್ತಿರಲಿಲ್ಲ. ಕಲುಷಿತ ನೀರು ಸೇವೆಯಿಂದ ಈಗಾಗಲೇ ಏಳೆಂಟು ಜನ ಆಸ್ಪತ್ರೆ ಸೇರಿದ್ದಾರೆ. ಜನರು ನನ್ನ ಮನೆ ಮುಂದೆ ಬಂದು ಗಲಾಟೆ ಮಾಡುತ್ತಿದ್ದಾರೆ. ಇದಕ್ಕೆ ರಮೇಶ್ ಅವರೇ ಕಾರಣವೆಂದು ಆರೋಪಿಸಿದರು.