ನೀರಿನ ಸಮಸ್ಯೆ ನಿವಾರಣೆಗೆ ಅಧಿಕಾರಿಗಳು ವಿಫಲ
ಕೋಲಾರ: ನಗರದ 17 ಮತ್ತು 18ನೇ ವಾರ್ಡಿನಲ್ಲಿ ಕುಡಿಯುವ ನೀರಿನ ಸಮಸ್ಯೆ ನಿವಾರಣೆ ಮಾಡಲು ಅಧಿಕಾರಿಗಳು ವಿಫಲರಾಗಿದ್ದಾರೆ ಎಂದು ನಗರಸಭೆ ಮಾಜಿ ಅಧ್ಯಕ್ಷ ಹಾಲಿ ಸದಸ್ಯ ಅಪ್ರೋಜ್ ಪಾಷ ಆರೋಪಿಸಿದರು.
ನಗರದ ಪತ್ರಕರ್ತರ ಭವನದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಗರದ 17 ಮತ್ತು 18ನೇ ವಾರ್ಡಿನಲ್ಲಿರುವ ನೀರಿನ ಸಮಸ್ಯೆ ನಿವಾರಣೆ ಹಾಗೂ ಸ್ವಚ್ಛತೆಗೆ ಹಲವಾರು ಬಾರಿ ಅಧಿಕಾರಿಗಳ ಗಮನಕ್ಕೆ ತಂದರೂ ಗಮನ ಹರಿಸಿಲ್ಲವೆಂದು ಕಿಡಿಕಾರಿದರು. ಎರಡು ವಾರ್ಡಿಗೆ ದಿನಕ್ಕೆ 4 ಟ್ಯಾಂಕ್ ನೀರು ಸರಬರಾಜು ಮಾಡಲಾಗುತ್ತಿದೆ. ಸರ್ಕಾರದ ನಿಯಮದಂತೆ ಕನಿಷ್ಟ ಪ್ರತಿ ವ್ಯಕ್ತಿಗೆ 55 ಲೀ. ನೀರು ಕೊಡಬೇಕು. ಈಗ ಪೂರೈಕೆ ಆಗುತ್ತಿರುವ 6 ಸಾವಿರ ಲೀಟರ್‌ನಿಂದ ಜನರ ದಾಹ ತೀರದಂತಾಗಿದೆ ಎಂದರು.
ನಗರಸಭೆ ಅಧ್ಯಕ್ಷ ಬಿ.ಎಂ.ಮುಬಾರಕ್ ಅವರ ಮನೆ 17ನೇ ವಾರ್ಡಿನಲ್ಲಿದ್ದು, ಅವರ ಮನೆಗೂ ನೀರು ಹೋಗುತ್ತದೆ ಎಂಬ ನಂಬಿಕೆ ನನಗಿಲ್ಲ. ಆದರೂ ಅಧ್ಯಕ್ಷರು ಈ ಬಗ್ಗೆ ಗಮನ ಹರಿಸದೆ ಇರುವುದು ಬೇಸರದ ಸಂಗತಿಯಾಗಿದೆ ಎಂದರು. ನಗರಸಭೆ ಅಧ್ಯಕ್ಷರು ಕೂಡಲೇ ಆಯವ್ಯಯ ಅಧಿವೇಶನ ಕರೆದು ನಗರದ ಸಮಸ್ಯೆಗಳನ್ನು ನಿವಾರಣೆ ಮಾಡಬೇಕೆಂದು ಒತ್ತಾಯಿಸಿದರು. ಸುದ್ದಿಗೋಷ್ಠಿಯಲ್ಲಿ 18ನೇ ವಾರ್ಡಿನ ಮುಖಂಡರಾದ ಜಮೀರ್ಪಾಷ್, ಮುನ್ಷಿಬಾಬು, ಪಯಾಜ್ ಇದ್ದರು.