ಪಕ್ಷದ ಮುಖಂಡರು ಸ್ಪಂದಿಸಲಿಲ್ಲ
ಕನ್ನಡಪ್ರಭ ವಾರ್ತೆ, ಕೋಲಾರ, ಮೇ 24
ಇತ್ತೀಚೆಗೆ ನಡೆದ ಲೋಕಸಭಾ ಚುನಾವಣೆಯಲ್ಲಿ ಕೋಲಾರ ಕ್ಷೇತ್ರದಿಂದ ಸ್ಪರ್ಧಿಸಿದ್ದ ಎಂ. ನಾರಾಯಣಸ್ವಾಮಿ ಪರವಾಗಿ ಅತ್ಯಂತ ಪ್ರಾಮಾಣಿಕವಾಗಿ ಕೆಲಸ ಮಾಡಿದ್ದು ಯುವ ಮೋರ್ಚಾ ಕಾರ್ಯಕರ್ತರೇ ಹೊರತು ಹಿರಿಯ ಮುಖಂಡರಲ್ಲ ಎಂದು ಯುವ ಮೋರ್ಚಾ ಮುಖಂಡರು ಆರೋಪಿದರು.
ನಗರದ ಬಿಜೆಪಿ ಕಾರ್ಯಾಲಯದಲ್ಲಿ ಶನಿವಾರ ಜಿಲ್ಲಾ ಯುವ ಮೋರ್ಚಾದಿಂದ ಹಮ್ಮಿಕೊಂಡಿದ್ದ ಆತ್ಮಾವಲೋಕನೆ ಸಭೆಯಲ್ಲಿ ಜಿಲ್ಲೆಯ ವಿವಿಧ ಕಡೆಗಳಿಂದ ಬಂದಿದ್ದ ಯುವ ಮೋರ್ಚಾ ಕಾರ್ಯಕರ್ತರು ಹಿರಿಯರು ಸ್ಪಂದಿಸಿದ್ದರೆ ಅಭ್ಯರ್ಥಿ ಸೋಲುತ್ತಿರಲಿಲ್ಲವೆಂದು ಪ್ರತಿಪಾದಿಸಿದರು. ಮೋದಿ ಅಲೆಯಲ್ಲಿ ಗೆಲ್ಲಬಹುದೆಂಬ ಲೆಕ್ಕಾಚಾರದಿಂದ ನಮ್ಮ ಅಭ್ಯರ್ಥಿಯು ಸಹ ಹೆಚ್ಚಿನ ಉತ್ಸಾಹದಿಂದ ಕೆಲಸ ಮಾಡಲಿಲ್ಲ. ಆದರೂ ಅವರಿಗೆ 2.67 ಲಕ್ಷ ಮತಗಳು ಬರಬೇಕಾದರೆ ಅದಕ್ಕೆ ಮೋದಿ ಮೇಲಿನ ಅಭಿಮಾನದಿಂದ ಯುವಕರು ಮತ ಚಲಾಯಿಸಿರುವುದೇ ಕಾರಣವೆಂದು ಸಮರ್ಥನೆ ಮಾಡಿಕೊಂಡರು.
ಜಿಲ್ಲೆಯಲ್ಲಿ ಪಕ್ಷ ಬೆಳೆಯಬೇಕಾದರೆ ಯುವಕರಿಗೆ ಸಂಘಟನೆಯ ಜವಾಬ್ದಾರಿ ನೀಡಬೇಕು. ಹಿರಿಯರು ಯುವಕರಿಗೆ ಮಾರ್ಗದರ್ಶಕರಾಗಿ ಕೆಲಸ ನಿರ್ವಹಿಸಿದಾಗ ಮಾತ್ರ ಪಕ್ಷ ಉಳಿಯುತ್ತದೆ ಎಂದು ಕಠೋರವಾಗಿ ತಮ್ಮ ಮನದಾಳದ ಅಭಿಪ್ರಾಯ ವ್ಯಕ್ತಪಡಿಸಿದರು.
ಹಿರಿಯರ ವಿರುದ್ಧ ದೂರು: ಯುವ ಮೋರ್ಚಾ ರಾಜ್ಯ ಕಾರ್ಯದರ್ಶಿ ಓಂಶಕ್ತಿ ಚಲಪತಿ ಮಾತನಾಡಿ, ಚಿಂತಾಮಣಿ, ಶಿಡ್ಲಘಟ್ಟ, ಶ್ರೀನಿವಾಸಪುರ ಹೊರತುಪಡಿಸಿದರೆ ಉಳಿದ ಕಡೆ ನಾರಾಯಣಸ್ವಾಮಿ ಅವರಿಗೆ ಗಣನೀಯ ಪ್ರಮಾಣದಲ್ಲಿ ಮತಗಳು ಬಿದ್ದಿವೆ ಎಂದು ಉದಾಹರಣೆ ಸಹಿತ ಮಾಹಿತಿ ನೀಡಿದರು.
ನಮ್ಮ ಅಭ್ಯರ್ಥಿ ಚುನಾವಣೆಗೆ ಎರಡು- ಮೂರು ದಿನ ಇರುವಾಗ ಹಣವಿಲ್ಲವೆಂದು ಎಲ್ಲೂ ಕಾಣಿಸಿಕೊಳ್ಳಲಿಲ್ಲ. ಇದರಿಂದ ಮತಗಟ್ಟೆಯಲ್ಲಿ ಕೆಲಸ ಮಾಡಬೇಕಾಗಿದ್ದ ಕಾರ್ಯಕರ್ತರು ಅಸಹಾಯಕರಾಗಬೇಕಾಯಿತು. ಪ್ರಚಾರದ ಸಂದರ್ಭದಲ್ಲೂ ಕೆಲ ಹಿರಿಯ ಮುಖಂಡರು ಅದರಲ್ಲೂ ಒಬ್ಬ ರಾಷ್ಟ್ರೀಯ ಕಾರ್ಯಕಾರಿ ಸಮಿತಿಯ ಸದಸ್ಯರು ಪ್ರಚಾರಕ್ಕೆ ಬರಬೇಕಾಗಿದ್ದ ಚಿತ್ರನಟಿ ಶೃತಿಯವರ ಕಾರ್ಯಕ್ರಮವನ್ನು ರದ್ದು ಮಾಡಿಸಿ ಪಕ್ಷಕ್ಕೆ ಹಿನ್ನಡೆ ಉಂಟು ಮಾಡಿದರೆಂದು ಹೆಸರು ಪ್ರಸ್ತಾಪಿಸಿದೆ ದೂರಿದರು.
ಹೈಟೆಕ್ ಪ್ರಚಾರದ ಉಸ್ತುವಾರಿ ಹೊತ್ತಿದ್ದ ಮುಕುಂದ ಮಾತನಾಡಿ, ಹಿರಿಯ ಮುಖಂಡರು ಯುವಕರನ್ನು ಸರಿಯಾದ ರೀತಿಯಲ್ಲಿ ಬಳಕೆ ಮಾಡಿಕೊಳ್ಳಲಿಲ್ಲ. ಪಕ್ಷದ ಸೋಲಿಗೆ ಕೆಲವು ಹಿರಿಯರ ನಡವಳಿಕೆ ಕಾರಣವಾಗಿದ್ದು ಇದನ್ನು ಹಿರಿಯ ನಾಯಕರ ಗಮನಕ್ಕೆ ತರಬೇಕೆಂದು ಸಭೆಯಲ್ಲಿ ಉಪಸ್ಥಿತರಿದ್ದ ರಾಜ್ಯ ಯುವ ಮೋರ್ಚಾ ಉಪಾಧ್ಯಕ್ಷ ಪರೀಕ್ಷಿತ್ ರಾಜ್, ಮಾಧ್ಯಮ ಪ್ರಮುಖ ವಿನಯ್ ಕುಮಾರ್ ಅವರಿಗೆ ಮನವಿ ಮಾಡಿದರು. ಮಾಲೂರಿನ ಸುರೇಶ್, ಹರ್ಷ, ಶ್ರೀನಿವಾಸಪುರದ ಮಂಜುನಾಥ್,ಅರವಿಂದ್, ಕೆಜಿಎಫ್ನ ಯಶವಂತ್ ಇನ್ನಿತರರು ತಾಲೂಕು ಅಧ್ಯಕ್ಷರು ಯುವಕರನ್ನು ಕಡೆಗಣಿಸಿದರೆಂದು ದೂರಿದರು.
ಯುವಶಕ್ತಿಯಿಂದಲೇ ಬಿಜೆಪಿ: ಕಾರ್ಯಕರ್ತರ ಅಭಿಪ್ರಾಯ ಅಲಿಸಿದ ಪರೀಕ್ಷಿತ್ ರಾಜ್, ಇನ್ನು ಮುಂದೆ ರಾಜ್ಯದಲ್ಲಿ ಬಿಜೆಪಿ ಯುವಶಕ್ತಿಯಿಂದಲೇ ಬೆಳೆಯಬೇಕಾಗಿದೆ. ಸೋಲಿನಿಂದ ಧೃತಿಗೇಡಬೇಕಾಗಿಲ್ಲ ಎಂದರು. ನ ಸ್ವೀಕರಿಸುತ್ತಿರುವ ಹಿನ್ನಲೆಯಲ್ಲಿ ಹಾಗೂ ಎನ್ಡಿಎ ಸರ್ಕಾರ ರಚನೆ ಮಾಡುತ್ತಿರುವುದರಿಂದ ಅಂದು ಸಂಭ್ರಮಾಚರಣೆ ಮಾಡಲು ನಿರ್ಧರಿಸಲಾಯಿತು.
ಅಂದು ಸಂಜೆ 4 ಗಂಟೆಗೆ ಸೋಮೇಶ್ವರ ದೇವಾಲಯ ಹಾಗೂ ಕೋಲಾರಮ್ಮ ದೇವಾಲಯದಲ್ಲಿ ಪೂಜೆ ಬಳಿಕ ನಗರದ ನಾಲ್ಕು ದಿಕ್ಕುಗಳಲ್ಲಿ ಜನರಿಗೆ ಸಿಹಿ ಹಂಚಿಕೆ ಮಾಡಲು ಹಾಗೂ ಬೈಕ್ ರ್ಯಾಲಿ ಮೂಲಕ ವಿಜಯೋತ್ಸಾಹ ಆಚರಿಸಲು ಸಿದ್ಧತೆ ಕೈಗೊಳ್ಳಲು ತೀರ್ಮಾನಿಸಲಾಯಿತು.
ಸಭೆಯಲ್ಲಿ ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ಪ್ರಮೋದ್ ಪ್ರಾಸ್ತಾವಿಕವಾಗಿ ಮಾತನಾಡಿದರು. ರಾಜ್ಯ ಸಮಿತಿ ಸದಸ್ಯ ಸುರೇಶ್, ಜಿಲ್ಲಾ ಸಮಿತಿಯ ಶಿವಕುಮಾರ್, ನರೇಶ್ ಇದ್ದರು. ಶ್ರೀನಾಥ್ ನಿರೂಪಿಸಿದರು.