ವಚನ ಸಾಹಿತ್ಯ ಅಧ್ಯಯನ ಪೀಠ ಸ್ಥಾಪನೆಗೆ ಯತ್ನ
ಕನ್ನಡಪ್ರಭ ವಾರ್ತೆ, ಕೋಲಾರ, ಮೇ 24
ಹಾಸನದಲ್ಲಿ ವಚನಕಾರರ ಸಾಹಿತ್ಯ ಅಧ್ಯಯನಕ್ಕಾಗಿ ಬಸವ ಅಧ್ಯಯನ ಪೀಠ ಸ್ಥಾಪನೆಗೆ ಪ್ರಯತ್ನ ನಡೆಯುತ್ತಿದೆ ಎಂದು ಕರ್ನಾಟಕ ವಚನ ಸಾಹಿತ್ಯ ಪರಿಷತ್ ಅಧ್ಯಕ್ಷ ಎಂ.ವಿ. ತ್ಯಾಗರಾಜ್ ತಿಳಿಸಿದರು.
ನಗರದ ಪತ್ರಕರ್ತರ ಭವನದಲ್ಲಿ ಶನಿವಾರ ವಚನ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕವನ್ನು ಉದ್ಘಾಟಿಸಿ ಮಾತನಾಡಿದ ಅವರು, ಯಾವುದೇ ಅಡ್ಡಿ ಆತಂಕಗಳು ಎದುರಾದರೂ ಮೆಟ್ಟಿ ನಿಂತು ಬಸವಣ್ಣನವರ ವಚನ ಸಾಹಿತ್ಯವನ್ನು ಜನರಿಗೆ ಮುಟ್ಟಿಸುವ ಕೆಲಸ ಮಾಡಲು ಕರ್ನಾಟಕ ವಚನ ಸಾಹಿತ್ಯ ಪರಿಷತ್ ಬದ್ಧವಾಗಿದೆ ಎಂದರು.
ವಚನ ಸಾಹಿತ್ಯವನ್ನು ಒಂದು ಜಾತಿಯ ಸೀಮಿತ ಚೌಕಟ್ಟಿನಲ್ಲಿ ನೋಡುವ ಮನೋಭಾವ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗುತ್ತಿದೆ ಎಂದು ವಿಷಾದಿಸಿದ ಅವರು, ಕೆಲ ಮಠಾಧೀಶರು ವಚನ ಸಾಹಿತ್ಯವನ್ನು ಪ್ರತಿಯೊಬ್ಬರಿಗೂ ತಲುಪುವಂತೆ ಮಾಡುವ ಬದಲು ಒಂದು ಜಾತಿಗೆ ಸೀಮಿತಗೊಳಿಸುವ ಮೂಲಕ ವಚನಕಾರರ ಆಶಯಗಳಿಗೆ ಧಕ್ಕೆ ಉಂಟು ಮಾಡುತ್ತಿದ್ದಾರೆಂದು ಆರೋಪಿಸಿದರು.
ಬಸವಣ್ಣನವರು ಎಂದೂ ಮಠಾಧೀಶರಾಗಿರಲಿಲ್ಲ. ಅವರಿಗೆ ಅಧಿಕಾರಿ, ಸಂಬಂಧಿಕರ ಒಡನಾಟವೂ ಇರಲಿಲ್ಲ. ಶೋಷಿತರ ಬದುಕಿಗಾಗಿ ತಮ್ಮ ಜೀವನವನ್ನೇ ಮುಡುಪಾಗಿಟ್ಟು, ಜಾತಿಯತೆಯನ್ನು ಹೋಗಲಾಡಿಸಿ ಸಮಾನತೆಯ ಸಮಾಜ ನಿರ್ಮಾಣದ ಗುರಿಯೊಂದಿಗೆ ಶ್ರಮಿಸಿದರು ಎಂದರು.
ವಚನ ಸಾಹಿತ್ಯದ ಮಹತ್ವದ ಕುರಿತು ಯುವಜನತೆಗೆ ಅರಿವು ಮೂಡಿಸುವ ಯತ್ನವನ್ನು ಪರಿಷತ್ ಮಾಡಲಿದ್ದು, ಈ ನಿಟ್ಟಿನಲ್ಲಿ ರಾಜ್ಯಾದ್ಯಾಂತ ಜಿಲ್ಲಾ, ತಾಲ್ಲೂಕು ಘಟಕಗಳ ಸ್ಥಾಪನೆ ಪ್ರಗತಿಯಲ್ಲಿದೆ ಎಂದರು.
ಪರಿಷತ್ ಆರಂಭಗೊಂಡ ಎರಡು ತಿಂಗಳುಗಳಲ್ಲಿ 16 ಜಿಲ್ಲಾ ಘಟಕಗಳನ್ನು ಸ್ಥಾಪಿಸಲಾಗಿದೆ. ಜೂನ್ ತಿಂಗಳಲ್ಲಿ ರಾಜ್ಯ ಸಮ್ಮೇಳನ ನಡೆಸುವ ಉದ್ದೇಶ ಹೊಂದಲಾಗಿದೆ ಎಂದು ಹೇಳಿದರು.
ರಾಜ್ಯ ವಚನ ಸಾಹಿತ್ಯ ಪರಿಷತ್ ಸಾರ್ವಜನಿಕ ಸಂಪರ್ಕಾಧಿಕಾರಿ ಎಂ.ಆರ್. ನಾಗರಾಜರಾವ್, ವಚನಗಳು ಸಮಾಜದಲ್ಲಿನ ಅಂಕುಡೊಂಕುಗಳನ್ನು ತಿದ್ದುವಲ್ಲಿ ಪ್ರಮುಖ ಪಾತ್ರ ವಹಿಸಿವೆ.
ಜಾತಿಯ ಮಂಕುಬೂದಿ ಎರಚುವ ವ್ಯಕ್ತಿಗಳಿಂದ ಎಚ್ಚರವಿರುವಂತೆ ಸಮುದಾಯವನ್ನು ಪ್ರೇರೇಪಿಸುತ್ತದೆ ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಕಸಾಪ ತಾಲೂಕು ಅಧ್ಯಕ್ಷ ಹಾಗೂ ವಚನ ಸಾಹಿತ್ಯ ಪರಿಷತ್ ರಾಜ್ಯ ಕಾರ್ಯದರ್ಶಿ ನಾರಾಯಣಪ್ಪ, ಕನ್ನಡ ಪರ ಸಂಘಟನೆಗಳು ಭಾಷೆ ಉಳಿವಿಗೆ ಶ್ರಮಿಸುವಂತೆ ಸಮಾಜಕ್ಕೆ ಸಂದೇಶ ನೀಡಿದ ವಚನ ಸಾಹಿತ್ಯವನ್ನು ಉಳಿಸಿ ಪೋಷಿಸಲು ಪರಿಷತ್ ಶ್ರಮಿಸುತ್ತಿದೆ ಎಂದರು.
ಅಧ್ಯಕ್ಷತೆಯನ್ನು ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ ಅಧ್ಯಕ್ಷ ರಾ. ರಾಮಪ್ರಸಾದ್ ವಹಿಸಿದ್ದರು. ಪರಿಷತ್‌ನ ಮಾಧ್ಯಮ ಸಂಪರ್ಕ ಮತ್ತು ಪ್ರಚಾರಕ ಆರ್.ಬಿ. ವೆಂಕಟೇಶ್, ಜಿಲ್ಲಾ ಉಪಾಧ್ಯಕ್ಷ ಕೋ.ನ. ಪರಮೇಶ್ವರ್, ಸುಲೇಮಾನ್ ಖಾನ್, ಪ್ರಧಾನ ಕಾರ್ಯದರ್ಶಿ ಗಿರೀಶ್ ಕುಮಾರ್, ಕೋಶಾಧ್ಯಕ್ಷ ಬಿ.ಎನ್. ರಾಮೇಗೌಡ ಹಾಗೂ ವಿವಿಧ ತಾಲೂಕು ಘಟಕಗಳ ಅಧ್ಯಕ್ಷರು ಇದ್ದರು.
ಸಿ.ಪದ್ಮಾವತಿ ನಿರೂಪಿಸಿ, ಮಾಗೇರಿ ಶ್ರೀನಿವಾಸ್ ಸ್ವಾಗತಿಸಿದರು.