ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಕಾಂಗ್ರೆಸ್ ಚಿತ್, ಜೆಡಿಎಸ್ ಜಯಭೇರಿ

Mainashree
Updated On : 25 May 2014, 11:49 am

ಕೋಲಾರ: ಸಾರ್ವತ್ರಿಕ ಚುನಾವಣೆಯಲ್ಲಿ ಕೋಲಾರ ಮತ್ತು ಚಿಕ್ಕಬಳ್ಳಾಪುರ ಜೆಡಿಎಸ್ ಸೋತರೂ ಕೂಡಾ, ಭಾನುವಾರ ನಡೆದ ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲಾ ಹಾಲು ಒಕ್ಕೂಟ(ಕೋಚಿಮುಲ್)ದ ಚುನಾವಣೆಯಲ್ಲಿ ಜಯಭೇರಿ ಬಾರಿಸಿದೆ.
ಒಟ್ಟು 13 ನಿರ್ದೇಶಕ ಸ್ಥಾನಗಳ ಪೈಕಿ ಜೆಡಿಎಸ್ ಬೆಂಬಲಿತ 7 ಅಭ್ಯರ್ಥಿಗಳು ಜಯಗಳಿಸಿದ್ದಾರೆ. ಕಾಂಗ್ರೆಸ್‌ನ ಐವರು ಹಾಗೂ ಪಕ್ಷೇತರರೊಬ್ಬರು ಚುನಾಯಿತರಾಗಿದ್ದಾರೆ.  ಈ ಬಾರಿ ಕೋಚಿಮುಲ್ ಚುನಾವಣೆಗೆ ಸ್ಪರ್ಧಿಸಿದ್ದ ಮಾಜಿ ಅಧ್ಯಕ್ಷ ಗುಡಿಯಪ್ಪ, ಡಾ.ಎ.ವಿ.ಪ್ರಸನ್ನ, ಎಸ್.ರಮೇಶ್, ಕಾಡೇನಹಳ್ಳಿ ನಾಗರಾಜ್, ಟಿ.ಎನ್.ರಾಜಗೋಪಾಲ್ ಸೋತಿದ್ದು, ಆಡಳಿತ ಮಂಡಳಿಗೆ ಹೊಸಬರು ಹೆಚ್ಚಿನ ಸಂಖ್ಯೆಯಲ್ಲಿ ಆಯ್ಕೆಯಾಗಿದ್ದಾರೆ. ಬಂಗಾರಪೇಟೆ ತಾಲೂಕಿನಿಂದ ಜೆಡಿಎಸ್ ಬೆಂಬಲಿತ ಅಭ್ಯರ್ಥಿ ಜಯಸಿಂಹ ಕೃಷ್ಣಪ್ಪ 7ನೇ ಬಾರಿಗೆ ಕೋಚಿಮುಲ್ ಪ್ರವೇಶಿಸಿದ್ದಾರೆ. ಇದೇ ರೀತಿ ಚಿಕ್ಕಬಳ್ಳಾಪುರ ತಾಲೂಕಿನಿಂದ ಚುನಾವಣೆ ಎದುರಿಸಿದ್ದ ಜೆಡಿಎಸ್‌ನ ಕೆ.ವಿ.ನಾಗರಾಜ್ ಸಹ ಮರು ಆಯ್ಕೆಯಾಗಿದ್ದಾರೆ. ಚಿಂತಾಮಣಿ ತಾಲೂಕಿನ ವೈ.ಬಿ.ಅಶ್ವಥ ನಾರಾಯಣ(ಬಾಬು) ಮಾಜಿ ಶಾಸಕ ಸುಧಾಕರರೆಡ್ಡಿ ಬಣದಿಂದ ಸ್ಪರ್ಧಿಸಿ ಗೆಲುವಿನ ನಗೆ ಬೀರಿದ್ದಾರೆ. ಕೋಲಾರ ತಾಲೂಕಿನಲ್ಲಿ ಈ ಬಾರಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಯಾಗಿದ್ದ ಎಸ್.ಆರ್.ರುದ್ರಸ್ವಾಮಿ ಪರವಾಗಿ ಶಾಸಕ ವರ್ತೂರ್ ಪ್ರಕಾಶ್ ಸೇರಿದಂತೆ ಕಾಂಗ್ರೆಸ್ ಮುಖಂಡರು ಕೆಲಸ ಮಾಡಿದ್ದರು. ಆದರೂ ಗೆಲ್ಲಲು ಸಾಧ್ಯವಾಗಲಿಲ್ಲ. ಜೆಡಿಎಸ್‌ನ ಛತ್ರಕೋಡಿ ರಾಮಕೃಷ್ಣೇಗೌಡ ಪಕ್ಷದಲ್ಲಿನ ಪ್ರಬಲ ಬಂಡಾಯದ ನಡುವೆಯೂ ಭರ್ಜರಿ ಜಯ ಸಾಧಿಸಿದ್ದಾರೆ. ಜೆಡಿಎಸ್ ಬಂಡಾಯ ಅಭ್ಯರ್ಥಿ ಬ್ಯಾಲಹಳ್ಳಿ ಶಂಕರೇಗೌಡ ಎರಡನೇ ಸ್ಥಾನಕ್ಕೆ ತಳ್ಳಿದ್ದಾರೆ. ಮಹಿಳಾ ಕ್ಷೇತ್ರದಿಂದ ಸ್ಪರ್ಧಿಸಿದ್ದ ಮುಳಬಾಗಲು ತಾಲೂಕಿನ ಜೆಡಿಎಸ್ ಬೆಂಬಲಿತ ಅಭ್ಯರ್ಥಿ ಪಾರ್ವತಮ್ಮ ಹಾಗೂ ಗೌರಿಬಿದನೂರು ತಾಲೂಕಿನ ಕಾಂಗ್ರೆಸ್ ಅಭ್ಯರ್ಥಿ ಸುನಂದಮ್ಮ ಗೆಲವು ಸಾಧಿಸಿದ್ದಾರೆ.
ಗೋಕುಲ್ ಕಾಲೇಜಿನಲ್ಲಿ ಚುನಾವಣೆ
ಚುನಾವಣೆ ಭಾನುವಾರ ನಗರದ ಗೋಕುಲ್ ಕಾಲೇಜಿನಲ್ಲಿ ಅತ್ಯಂತ ಪೊಲೀಸ್ ಬಂದೋಬಸ್ತ್‌ನಲ್ಲಿ ನಡೆಯಿತು. ಅಭ್ಯರ್ಥಿಗಳ ಬೆಂಬಲಿಗರು ಐಶಾರಾಮಿ ಕಾರುಗಳಲ್ಲಿ ಮತಗಟ್ಟೆಗೆ ಬಂದು ಮತ ಚಲಾಯಿಸಿದರು. ಉಪವಿಭಾಗಾಧಿಕಾರಿ ಮಂಜುನಾಥ್ ಅವರು ಚುನಾವಣಾಧಿಕಾರಿಯಾಗಿ ಕಾರ್ಯ ನಿರ್ವಹಿಸಿದರು. ಬೆಳಿಗ್ಗೆ 8ರಿಂದ 3 ಗಂಟೆಗೆಯವರೆಗೆ ಮತದಾನ ನಡೆಯಿತು ಸಂಜೆ 5.30ರ ವೇಳೆಗೆ ಎಲ್ಲಾ ಕ್ಷೇತ್ರಗಳ ಮತ ಎಣಿಕೆ ನಡೆಸಿ ಅಂತಿಮ ಫಲಿತಾಂಶ ಪ್ರಕಟಿಸಲಾಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement