ಕುಡಿವ ನೀರಿಗೆ ಆಗ್ರಹಿಸಿ ದಿಢೀರ್ ಪ್ರತಿಭಟನೆ
ಚಿಂತಾಮಣಿ: ಡಾ.ಬಿ.ಆರ್.ಅಂಬೇಡ್ಕ ನಗರ ನಿವಾಸಿಗಳಿಗೆ ನೀರು ಪೂರೈಸದ ಅಧಿಕಾರಿ ವಿರುದ್ಧ ನೂರಾರು ನಿವಾಸಿಗಳು ಖಾಲಿ ಬಿಂದಿಗೆಗಳೊಂದಿಗೆ ರಸ್ತೆಗಿಳಿದು ಪ್ರತಿಭಟನೆ ನಡೆಸಿದರು.
ಅಧಿಕಾರಿಗಳು ದಲಿತ ವಿರೋಧಿ ನೀತಿಯನ್ನು ಅನುಸರಿಸುತ್ತಿದ್ದಾರೆ. ಕಳೆದ ಇಪ್ಪತ್ತು ದಿನಗಳಿಂದ ಸರಿಯಾಗಿ ಕುಡಿಯುವ ನೀರನ್ನು ಪೂರೈಸುತ್ತಿಲ್ಲ. ಇದಕ್ಕೆಲ್ಲ ಇಲ್ಲಿನ ಅಧಿಕಾರಿಗಳೇ ಕಾರಣ ಎಂದು ಆರೋಪಿಸಿ, ಇಲ್ಲಿನ ನೂರಾರು ನಿವಾಸಿಗಳು ಖಾಲಿ ಬಿಂದಿಗೆಗಳನ್ನು ಹಿಡಿದು ರಸ್ತೆ ತಡೆ ಮಾಡಿ, ಅಧಿಕಾರಿಗಳ ದಿಕ್ಕಾರ ಕೂಗಿದರು.
ಸುದ್ದಿ ತಿಳಿದ ಘಟಣಾ ಸ್ಥಳಕ್ಕೆ ಪಿಎಸ್ಐ ಮುರುಳಿ ಭೇಟಿ ನೀಡಿ, ಪ್ರತಿಭಟನಾಕಾರರನ್ನು ಸಮಾಧಾನಪಡಿಸಲು ಯತ್ನಿಸಿದರು. ಅಲ್ಲದೆ, ನಗರಸಭೆ ಸದಸ್ಯೆ ಸುಜಾತಮ್ಮ ಕೂಡಾ ಆಗಮಿಸಿ, ಕೂಡಲೇ ನೀರಿನ ಟ್ಯಾಂಕರ್ ಮೂಲಕ ನೀರು ಪೂರೈಸುವ ಭರವಸೆ ನೀಡಿದರು. ಬಳಿಕ ಪ್ರತಿಭಟನೆ ಹಿಂಪಡೆಯಲಾಯಿತು.
ದಿಢೀರ್ ಪ್ರತಿಭಟನೆಯಿಂದಾಗಿ ಪಟ್ಟಣದ ಎಂ.ಜಿ.ರಸ್ತೆಯಿಂದ ವಾಲ್ಮೀಕಿ ಸರ್ಕಲ್ವರೆಗೂ ಒಂದು ಗಂಟೆಗಳ ಕಾಲ ಸಂಚಾರ ಅಸ್ತವ್ಯಸ್ತವಾಗಿತ್ತು. ಈ ವೇಳೆ, ನಾರಾಯಣಸ್ವಾಮಿ, ತಿಮ್ಮರಾಜು, ಚಿನ್ನಪ್ಪಿ, ರಾಣಿ, ನೇತ್ರ, ಲಕ್ಮ್ಷಿ, ಪಾಪಮ್ಮ, ಶಿವಣ್ಣ ಸೇರಿದಂತೆ ನೂರಾರು ನಿವಾಸಿಗಳು ಉಪಸ್ಥಿತರಿದ್ದರು.