ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಗುಡಿಸಲು ಮುಕ್ತ ರಾಜ್ಯವಿರಲಿ, ಕ್ಷೇತ್ರವೇ ಆಗಿಲ್ಲ!

Mainashree
Updated On : 25 May 2014, 11:50 am

ಬಂಗಾರಪೇಟೆ: ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿ ಅಧಿಕಾರಿವಹಿಸಿಕೊಂಡ ಬಳಿಕ ರಾಜ್ಯವನ್ನು ಗುಡಿಸಲು ಮುಕ್ತವಾಗಿ ನಿರ್ಮಾಣ ಮಾಡುವುದಾಗಿ ಘೋಷಿಸಿದ್ದರು. ಇದಕ್ಕೆ ವಸತಿ ಸಚಿವ, ನಟ ಅಂಬರೀಷ್ ಕೂಡಾ ದನಿಗೂಡಿಸಿದ್ದರು. ಆದರೆ ಐದು ವರ್ಷಗಳಲ್ಲಿ ಅವರು ಈ ಘೋಷಣೆ ಕಾರ್ಯರೂಪಕ್ಕೆ ಬರಲು ಸಾಧ್ಯವೇ ಎಂಬ ಪ್ರಶ್ನೆ ಇದೀಗ ಕಾಡುತ್ತಿದೆ.
ಸರ್ಕಾರ ಅಧಿಕಾರಕ್ಕೆ ಬಂದು ವರ್ಷವಾದರೂ ಬಂಗಾರಪೇಟೆ ಕ್ಷೇತ್ರದಲ್ಲಿ ಒಂದೇ ಒಂದು ಮನೆ ಬಡವರಿಗೆ ದಕ್ಕಿಲ್ಲ. ಬಿಜೆಪಿ ಸರ್ಕಾರದ ಆಡಳಿತದಲ್ಲಿ ಕ್ಷೇತ್ರವೊಂದಕ್ಕೆ ಹತ್ತು ಸಾವಿರ ವಿವಿಧ ಯೋಜನೆಗಳಲ್ಲಿ ಮನೆಗಳು ಮಂಜೂರಾಗಿದ್ದವು. ಆದರೆ, ಆ ಮನೆಗಳಲ್ಲಿ ಇದುವರೆಗೂ ಎಷ್ಟು ಮನೆಗಳು ನಿರ್ಮಾಣವಾಗಿವೆ ಎಂಬುದು ಯಾರಿಗೂ ಗೊತ್ತಿಲ್ಲ. ಮೊದಲ ಕಂತಿನಲ್ಲಿ ಆರು ಸಾವಿರ ಮನೆ ಹಂಚಲಾಗಿತ್ತು. ಅಂದಿನ ಶಾಸಕ ಎಂ.ನಾರಾಯಣಸ್ವಾಮಿ ಫಲಾನುಭವಿಗಳ ಆಯ್ಕೆಯಲ್ಲಿ ಸಿಕ್ಕಾಪಟ್ಟೆ ಲೋಪಗಳನ್ನು ಎಸಗಿದ್ದಾರೆ. ಅರ್ಹರ ಬದಲು ಉಳ್ಳವರಿಗೆ ಮನೆಗಳು ದಕ್ಕಿವೆ. ಈ ಪಟ್ಟಿಯನ್ನು ಬದಲಾಯಿಸಬೇಕು ಎಂದು ಅಂದು, ಈಗ ಶಾಸಕರಾಗಿರುವ ಶಾಸಕ ಎಸ್.ಎನ್.ನಾರಾಯಣಸ್ವಾಮಿ ಒತ್ತಾಯಿಸಿದ್ದರು. ಆದರೆ, ಈಗ ಇವರ ಬಳಿಯೇ ಅಧಿಕಾರವಿದೆ. ಆದರೆ, ಮನೆಗಳು ಮಾತ್ರ ಕಾಣುತ್ತಿಲ್ಲ! ಪುರಸಭೆ ವ್ಯಾಪ್ತಿಯಲ್ಲಿ ಉಚಿತ ಸೈಟ್‌ಗಳಿಗಾಗಿ ಸುಮಾರು 15 ಸಾವಿರ ಅರ್ಜಿಗಳು ಕಳೆದ ಹತ್ತು ವರ್ಷಗಳಿಂದ ಗೆದ್ದಲು ಹಿಡಿದಿವೆ. ಇದುವರೆಗೂ ಬಡವರಿಗೆ ಸೈಟ್‌ಗಳನ್ನು ವಿತರಿಸುವ ಗೋಜಿಗೆ ವ್ಯವಸ್ಥೆ ಹೋಗಿಲ್ಲ. ಇನ್ನು ಗ್ರಾಮಾಂತರ ಸ್ಥಿತಿಯೂ ಇದಕ್ಕಿಂತ ಭಿನ್ನವಾಗಿಲ್ಲ. ವಾಸ್ತವ ಹೀಗಿರುವಾಗ ರಾಜ್ಯವನ್ನು ಗುಡಿಸಲು ಮುಕ್ತವಾಗಿ ಮಾಡಲು ಹೇಗೆ ತಾನೆ ಸಾಧ್ಯ ಎಂದು ಜನರು ಪ್ರಶ್ನಿಸುತ್ತಿದ್ದಾರೆ.
ಹಿಂದಿನ ಸರ್ಕಾರದಲ್ಲಿ ಮಂಜೂರಾಗಿದ್ದ ಮನೆಗಳು ಅರ್ಧಕ್ಕೆ ಸ್ಥಗಿತಗೊಂಡಿದ್ದು, ಸೂರು ಸಿಗುವುದೆಂಬ ನಿರೀಕ್ಷೆಯಿಂದ ಪಾಯ ಸಹ ಹಾಕಿಕೊಂಡು ಮೊದಲ ಕಂತಿನ ಬಿಲ್‌ಗಾಗಿ ಜನರು ಎದುರು ನೋಡುತ್ತಿದ್ದಾರೆ. ಆದರೆ ಅಧಿಕಾರಿಗಳು ಬಿಲ್ ಪಾವತಿ ಮಾಡುತ್ತಿಲ್ಲ ಎಂಬುದು ಜನರ ಆರೋಪ.

ಕೆ.ರಮೇಶ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement