ಚಿಣ್ಣರ ಅಂಗಳ ಸೇರಿದ ಶಾಲೆ ಬಿಟ್ಟ ಬಾಲಕಿ
ಕೋಲಾರ: ನಗರದ 28 ನೇ ವಾರ್ಡಿನ ಕೀಲುಕೋಟೆಯಲ್ಲಿ ಸುಮಾರು 1 ವರ್ಷದಿಂದ ಶಾಲೆಯಿಂದ ಹೊರಗುಳಿದಿದ್ದ ಏಳನೇ ತರಗತಿಯ ಸವಿತಾ ಎಂಬ ಬಾಲಕಿಯನ್ನು ಮರಳಿ ಶಾಲೆಗೆ ಕರೆತರುವಲ್ಲಿ ಶಿಕ್ಷಣ ಇಲಾಖೆಯವರು ಸಫಲರಾಗಿದ್ದಾರೆ.
ಶಾಲೆ ತೊರೆದ ಮಕ್ಕಳ ಶೋಧನೆ ನಡೆಸುತ್ತಿದ್ದಾಗ ಪತ್ತೆಯಾದ ಸವಿತಾಳ ಪೋಷಕರನ್ನು ಮನಮೊಲಿಸಲು ತಂಡ ಯಶಸ್ವಿಯಾಗಿದ್ದು ಈ ಕಾರ್ಯಕ್ಕೆ 28ನೇ ವಾರ್ಡಿನ ಸದಸ್ಯ ಕಾಶಿ ವಿಶ್ವನಾಥ್ ಸಹಕರಿಸಿ ಇತರರಿಗೆ ಮಾದರಿ ಆಗಿದ್ದಾರೆ. ವಿಶೇಷ ಆಸಕ್ತಿ ತೋರಿಸಿ ಬಾಲಕಿ ಚಿಣ್ಣರ ಅಂಗಳ ಸೇರುವಂತೆ ಮಾಡಿರುವ ನಗರಸಭಾ ಸದಸ್ಯ ಕಾಶಿ ವಿಶ್ವನಾಥ ರವರನ್ನು ಶಿಕ್ಷಣ ಇಲಾಖೆಯ ಪರವಾಗಿ ಶಿಕ್ಷಣ ಸಂಯೋಜಕರಾದ ಲಕ್ಷ್ಮಣಪ್ಪ ಅಭಿನಂದಿಸಿದ್ದಾರೆ. ಕೀಲುಕೋಟೆಯ ಗಾರೆ ಮೇಸ್ತ್ರಿ ನಾಗರಾಜು ರವರ ಪುತ್ರಿ ಸವಿತಾ ಶಾಲೆಯಿಂದ ಹೊರಗುಳಿದಿದ್ದಾಳೆ ಎಂಬ ಮಾಹಿತಿಯೊಂದಿಗೆ ಹೊರಟ ಇಲಾಖಾಧಿಕಾರಿಗಳ ತಂಡ ಅಲ್ಲಿನ ನಗರಸಭಾ ಸದಸ್ಯ ಕಾಶಿ ವಿಶ್ವನಾಥ್ ರವರಿಗೆ ದೂರವಾಣೆ ಕರೆ ಮಾಡಿ ಸಹಕಾರ ಯಾಚಿಸಿದಾಗ ಕಾಶಿ ವಿಶ್ವನಾಥ್, ಬಾಲಕಿಯರ ಪೋಷಕರನ್ನು ಸಂಪರ್ಕಿಸಿ ಹೆಣ್ಣು ಮಕ್ಕಳ ಶಿಕ್ಷಣದ ಮಹತ್ವ ಅವರಿಗೆ ತಿಳಿಸಿ ಬುದ್ಧಿವಾದ ಹೇಳಿದರು.
ಸವಿತಾಳ ವಿದ್ಯಾಭ್ಯಾಸಕ್ಕೆ ನೆರವು ನೀಡುವುದಾಗಿ ಭರವಸೆಯಿತ್ತರು.ಇದರಿಂದ ಉತ್ತೇಜಿತರಾದ ಪೋಷಕರು ಸವಿತಾಳನ್ನು ಕಮಲಮಹಡಿ ಶಾಲೆಯಲ್ಲಿ ನಡೆಯುತ್ತಿರುವ ಚಿಣ್ಣರ ಅಂಗಳ ಶಿಬಿರಕ್ಕೆ ಕಳುಹಿಸಿ ಬಾಲಕಿಯು ಮತ್ತೆ ಶಾಲೆಗೆ ಸೇರುವುದಕ್ಕೆ ಆಸಕ್ತಿ ತೋರಿದ್ದಾರೆ. ಇದೇ ತಂಡ ಖಾದ್ರಿಪುರಕ್ಕೆ ತೆರಳಿ ಅಲ್ಲಿನ ಕೊಳೆಚೆ ನಿರ್ಮೂಲನ ಮಂಡಳಿ ನಿರ್ಮಿಸಿರುವ ಮನೆಗಳ ನಿವಾಸಿ ವೆಂಕಟರಾಮಪ್ಪ ಇಬ್ಬರು ಪುತ್ರಿಯರಾದ ಸುಜಾತ ಮತ್ತು ಸುವರ್ಣ ಎಂಬುವರನ್ನು ಮರಳಿ ಶಾಲೆಗೆ ಕರೆತರುವಲ್ಲಿ ಸಫಲರಾಗಿದ್ದಾರೆ. ಸುಜಾತ ಮತ್ತು ಸುವರ್ಣ ಸಹ 7 ನೇ ತರಗತಿ ಉತೀರ್ಣರಾಗಿದ್ದರೂ ಕಳೆದ 1 ವರ್ಷದಿಂದ ಶಾಲೆಯಿಂದ ಹೊರಗುಳಿದಿದ್ದರು. ತಂಡದಲ್ಲಿ ಶಿಕ್ಷಣ ಇಲಾಖೆಯ ಕೆಂಪೇಗೌಡ, ಕೆ.ಎಸ್. ಮುನಿರಾಜು, ಬೈರೇಗೌಡ, ಸೊಣ್ಣೇಗೌಡ, ನಾಗರಾಜ್, ಪುಷ್ಪ, ಮುನಿಸ್ವಾಮಿರೆಡ್ಡಿ ಸೇರಿ ಅನೇಕರಿದ್ದರು.