ದೊಡ್ಡಪಾಪನಕೆರೆಗೆ ಬಿದ್ದು ವಿದ್ಯಾರ್ಥಿಗಳಿಬ್ಬರ ಸಾವು
ಮುಳಬಾಗಲು: ಪಟ್ಟಣದ ಹೊರವಲಯದ ದೊಡ್ಡಪಾಪನ ಕೆರೆಯಲ್ಲಿ ಮುಳುಗಿ ಇಬ್ಪರು ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳ ಮೃತಪಟ್ಟ ಘಟನೆ ಭಾನುವಾರ ಬೆಳಗ್ಗೆ ಬೆಳಕಿಗೆ ಬಂದಿದೆ.
ಪಟ್ಟಣದ ಅಮರಜ್ಯೋತಿ ವಿದ್ಯಾಸಂಸ್ಧೆಯ ವಿದ್ಯಾರ್ಥಿಗಳಾದ ಅಸ್ಟೇರಿನ್(15) ಮತ್ತು ರೋವಂತ್(14) ಶನಿವಾರ ಶಾಲೆ ಮುಗಿಸಿಕೊಂಡು ಮನೆಗೆ ಹಿಂತಿರುಗಿ ಆಟವಾಡಲು ಹೋಗಿದ್ದಾರೆ. ಮತ್ತೆ ರಾತ್ರಿಯಾದರೂ ಅವರು ಮನೆಗೆ ಮರಳಿಲ್ಲ. ಮನೆಯವರು ಶೋಧಿಸಿದ್ದಾರೆ. ಸ್ನೇಹಿತರ ಮನೆಗಳಲ್ಲಿ ಇರದ ಕಾರಣ ಕೆರೆಯಲ್ಲಿ ಹುಡುಕಾಟ ನಡೆಸಿದ್ದಾರೆ. ಆದರೆ, ಭಾನುವಾರ ಬೆಳಗ್ಗೆ ಈ ಇಬ್ಬರ ಮೃತ ದೇಹಗಳು ದೊಡ್ಡಪಾಪನ ಕೆರೆಯಲ್ಲಿ ಪತ್ತೆಯಾಗಿವೆ.
ಮುಳಬಾಗಲು ಸರ್ಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ, ಶವಗಳನ್ನು ಅವರ ಪಾಲಕರಿಗೆ ನೀಡಲಾಯಿತು. ಮುಳಬಾಗಲು ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ. ಅಮರಜ್ಯೋತಿ ವಿದ್ಯಾಸಂಸ್ಧೆಯ ಅಧ್ಯಕ್ಷ ಕಾಡೇನಹಳ್ಳಿ ನಾಗರಾಜ್, ಕಾರ್ಯದರ್ಶಿ ಅಶೋಕ್ ತಮ್ಮ ಶಾಲೆಯ ಮಕ್ಕಳ ಅಕಾಲಿಕ ಮರಣಕ್ಕೆ ತೀವ್ರ ಸಂತಾಪ ವ್ಯಕ್ತಪಡಿಸಿ, ವಿದ್ಯಾರ್ಥಿಗಳ ಗೌರವಾರ್ಥ ಸೋಮವಾರ ಶಾಲೆಗೆ ರಜೆ ಘೋಷಿಸಿದ್ದಾರೆ.