ಮಾಮೂಲಿ ವಸೂಲಿ ಮಾಡುವ ಪೇದೆಗಳ ವಿರುದ್ಧ ಕ್ರಮಕ್ಕೆ ಆಗ್ರಹ
ಕೋಲಾರ: ತಾಲೂಕಿನ ನರಸಾಪುರ ಮರಳು ತಪಾಸಣಾ ಕೇಂದ್ರದ ರಾಮಸಂದ್ರ ಗೇಟ್ ಬಳಿ ಅಕ್ರಮ ಮರಳು ಸಾಗಾಣಿಕೆ ಲಾರಿಗಳಿಂದ ಹಣ ವಸೂಲಿ ಮಾಡುತ್ತಿರುವ ವೇಮಗಲ್ ಪೊಲೀಸ್ ಪೇದೆಗಳಾದ ಪಿ.ಸಿ.ಪ್ರಕಾಶ್ ಮತ್ತು ತಿಮ್ಮರಾಜು ವಿರುದ್ಧ ಕ್ರಮ ಕೈಗೊಳ್ಳುವಂತೆ ಲಾರಿ ಮಾಲೀಕ ರಾಜು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯನ್ನು ಒತ್ತಾಯಿಸಿದ್ದಾರೆ.
ಅಕ್ರಮ ಮರಳು ಸಾಗಾಣಿಗೆ ತಡೆಯಲು ಜಿಲ್ಲಾಧಿಕಾರಿಗಳು ಕಟ್ಟುನಿಟ್ಟಿನ ಕ್ರಮಕೈಗೊಂಡಿದ್ದಾರೆ. ಆದರೆ, ಸಂಪೂರ್ಣವಾಗಿ ಅಕ್ರಮ ಮರಳು ಸಾಗಾಣಿಕೆ ನಿಂತಿಲ್ಲ. ಅಕ್ರಮ ಮರಳು ಸಾಗಾಣಿಕೆಯನ್ನು ತಡೆಯಲು ರಾಷ್ಟ್ರೀಯ ಹೆದ್ದಾರಿಯಲ್ಲಿ ರಾಮಸಂದ್ರ ಗೇಟ್ ಬಳಿ ತಪಾಸಣಾ ಕೇಂದ್ರ ತೆರೆಯಲಾಗಿದೆ. ಆದರೆ ಪ್ರತಿ ನಿತ್ಯ ತಪಾಸಣಾ ಕೇಂದ್ರದಲ್ಲಿ ಪೇದೆಗಳಾದ ಪ್ರಕಾಶ್ ಮತ್ತು ತಿಮ್ಮರಾಜು ಲಾರಿಗಳಿಂದ ಹಣ ಸುಲಿಗೆ ಮಾಡುತ್ತಾರೆ ಎಂದು ಆರೋಪಿಸಿದ್ದಾರೆ.
ಈ ಪೇದೆಗಳಿಬ್ಬರೂ ಪ್ರತಿ ಲಾರಿಗೆ 1000ರಂತೆ ನಿತ್ಯ 60ರಿಂದ 70 ಲಾರಿಗಳಿಂದ ಹಣ ಪಡೆಯುತ್ತಿದ್ದಾರೆ. ಇವರಿಬ್ಬರಿಂದಾಗಿ ನಿತ್ಯ ಅಕ್ರಮ ಮರಳು ಬೆಂಗಳೂರು ತಲುಪುತ್ತಿದೆ ಎಂದು ಅವರು ಆರೋಪಿಸಿದ್ದಾರೆ.
ಇಬ್ಬರು ಪಿಸಿಗಳಲ್ಲಿ ಪ್ರಕಾಶ್ ಎಂಬುವರು ವೇಮಗಲ್ ಠಾಣೆ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಹಣ ವಸೂಲಿಗಾಗಿಯೇ ನರಸಾಪುರ ಬೌಂಡರಿ ಗೇಟ್ ಬಳಿ ಬರುತ್ತಾರೆ.ಇವರಿಬ್ಬರ ವಿರುದ್ಧವೂ ಕ್ರಮಕೈಗೊಳ್ಳಬೇಕು ಎಂದು ಅವರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಮನವಿ ಮಾಡಿದ್ದಾರೆ.