ಸಾರ್ವಜನಿಕ ಶೌಚಾಲಯ ಸರ್ವನಾಶ!
ಕನ್ನಡಪ್ರಭ ವಾರ್ತೆ, ಗುಡಿಬಂಡೆ, ಮೇ 25
ಸರ್ಕಾರ ಬಡಜನರಿಗೆ ಉಪಯುಕ್ತವಾಗುವ ಉದ್ದೇಶದಿಂದ ಸ್ಥಳೀಯ ಪಪಂ ವತಿಯಿಂದ ಪಟ್ಟಣದಲ್ಲಿ ಸುಮಾರು 18 ಲಕ್ಷ ವೆಚ್ಚದಲ್ಲಿ 3 ವಾರ್ಡ್ಗಳಲ್ಲಿ ಶೌಚಾಲಯಗಳನ್ನು ನಿರ್ಮಿಸಿದೆ. ಆದರೆ, ಜನರು ಮಾತ್ರ ಈ ಶೌಚಾಲಯಗಳನ್ನು ಬಳಸದೇ ಸರ್ಕಾರ ಉದ್ದೇಶವನ್ನೇ ಅಣಕಿಸುತ್ತಿರುವ ಹಾಗಿದೆ.
ಮುಖ್ಯಮಂತ್ರಿಗಳ ನಗರಾಭಿವೃದ್ಧಿ ಯೋಜನೆಯಡಿ 2009-2010 ನೇ ಸಾಲಿನಲ್ಲಿ ಪಟ್ಟಣದ 1ನೇ ವಾರ್ಡಿನ ಇಂದಿರಾನಗರದಲ್ಲಿ 5 ಲಕ್ಷ, 6ನೇ ವಾರ್ಡಿನ ನಾಯಕರ ಕಾಲೋನಿಯಲ್ಲಿ 5 ಲಕ್ಷ ಮತ್ತು 10ನೇ ವಾರ್ಡಿನ ಬಾಪೂಜಿನಗರದಲ್ಲಿ 8 ಲಕ್ಷ ವೆಚ್ಚದಲ್ಲಿ ಒಟ್ಟು 6 ಶೌಚಾಲಯಗಳನ್ನು ನಿರ್ಮಿಸಲಾಗಿದೆ. ಆದರೆ, ಶೌಚಾಲಯಗಳ ಉದ್ಘಾಟನೆಯಾದ ದಿನದಿಂದ ಇಂದಿನವರೆಗೂ ಸಮರ್ಪಕವಾಗಿ ಬಳಕೆಯಾದ ಉದಾಹರಣೆಗಳೇ ಇಲ್ಲ.
ನಿರ್ವಹಣೆ ಕೊರತೆ: 10ನೇ ವಾರ್ಡ್ನಲ್ಲಿರುವ ಶೌಚಾಲಯದಲ್ಲಿ ಅಳವಡಿಸಿದ್ದ ನೀರಿನ ಪ್ಲಾಸ್ತಿಕ್ ಟ್ಯಾಂಕ್, ಪೈಪ್, ಮುಂತಾದ ವಸ್ತುಗಳು ಕಳ್ಳರ ಪಾಲಾಗಿವೆ. ಈ ಬಗ್ಗೆ ನಗರಸಭೆ ಸದಸ್ಯ ಅಪ್ಸರ್ ಪ್ರತಿಕ್ರಿಯಿಸಿದ್ದು, ನನ್ನ ವಾರ್ಡ್ನಲ್ಲಿ ಬಡ ಜನರೇ ಹೆಚ್ಚು. ಅವರು ಇವುಗಳನ್ನು ಬಳಸಿಕೊಳ್ಳಳು ಮುಂದೆ ಬರುತ್ತಿಲ್ಲ ಎಂದಿದ್ದಾರೆ.
ಜನರು ಏನು ಅಂತಾರೆ?: ಸರ್ಕಾರವೇನೋ ನಮ್ಮ ಅನುಕೂಲಕ್ಕೆ ಶೌಚಾಲಯ ನಿರ್ಮಿಸಿದೆ. ಆದರೆ ಕೆಲವರು ಶೌಚಾಲಯಗಳನ್ನು ಸೂಕ್ತ ರೀತಿ ಬಳಸಿಕೊಳ್ಳಲು ಮುಂದಾಗುವುದಿಲ್ಲ. ಶೌಚಾಲಯಗಳನ್ನು ಬಳಸುವವರು ಅಲ್ಲಿಯ ಸ್ವಚ್ಛತೆ ಬಗ್ಗೆ ಗಮನಹರಿಸುವುದಿಲ್ಲ. ಹಾಗಾಗಿ, ಶೌಚಾಲಯ ಅಕ್ಕಪಕ್ಕದಲ್ಲಿರುವ ನಮಗೆ ರೋಗಗಳು ಹರಡುವ ಭೀತಿ ಇದೆ ಎನ್ನುತ್ತಾರೆ ಇಲ್ಲಿನ ನಿವಾಸಿಗಳು.