ಆಲಿಕಲ್ಲು ಮಳೆ; ಬೆಳೆ ಹಾನಿ
ಮುಳಬಾಗಲು: ತಾಲೂಕಿನ ಕಸಬಾ ಹೋಬಳಿ ಪಿ.ಗಂಗಾಪುರ, ಮತ್ತು ಮಜರಾ ವೆಂಕಟಪುರ ಗ್ರಾಮದಲ್ಲಿ ಸೋಮವಾರ ಸಂಜೆ ಸುರಿದ ಬಾರಿ ಅಲಿಕಲ್ಲು ಮಳೆಯ ಕಾರಣ ಲಕ್ಷಾಂತರ ರುಪಾಯಿ ಮೌಲ್ಯದಬೆಳೆ ನಷ್ಟ ಉಂಟಾಗಿದೆ.
ಗ್ರಾಮಸ್ಥರು ಉಂಡೆಉಂಡೆಯಾಗಿ ಬಿದ್ದ ಆಲಿಕಲ್ಲುಗಳನ್ನು ಕಂಡು ಚಕಿತರಾಗುತ್ತಿದ್ದಂತೆ ಆತಂಕದ ಕ್ಷಣಗಳು ಸಹ ಎದುರಾಯಿತು. ನೂರಾರು ಎಕರೆ ಮಾವು, ಕೊಯ್ಲಿಗೆ ಬಂದಿರುವ ಟೊಮೆಟೋ, ಬೀನ್ಸ್ ಮುಂತಾದ ಬೆಳೆಗಳು ಆಲಿಕಲ್ಲಿನಿಂದ ಆವೃತವಾಗಿ ತೀವ್ರ ನಷ್ಟಕ್ಕೆ ಕಾರಣವಾಯಿತು. ಗ್ರಾಮದ ಜಿ. ನಾರಾಯಣಸ್ವಾಮಿ ಅವರ ತೋಟದಲ್ಲಿ ಬೆಳೆದಿದ್ದ ಬೀನ್ಸ್ ಬೆಳೆಯನ್ನು ನಾಳೆ ಅವರು ಮಾರುಕಟ್ಚಿಗೆ ಕಳಿಸಬೇಕಿತ್ತು. ಆದರೆ ತೋಟ ಸಂಪೂರ್ಣ ಆಲಿಕಲ್ಲಿನಿಂದ ಅವೃತವಾಗಿದೆ ಎಂದು ಅವರು ನೋವು ತೋಡಿಕೊಂಡರು.ವಿ. ಮುನಿರಾಮಯ್ಯ, ಶಿವಣ್ಣ ಅವರ ಟೊಮೆಟೋ ತೋಟ ಹಾಗೂ ಇತರೆ ವಾಣೆಜ್ಯ ಬೆಳೆಗಳು ನಷ್ಟವಾಗಿದೆ. ಮಾವಿನ ವ್ಯಾಪಾರ ನಂಬಿ ಹಲವಾರು ಲಕ್ಷ ರುಪಾಯಿ ಬಂಡವಾಳ ಹಾಕಿರುವ ಸೊನ್ನವಾಡಿ ಗ್ರಾಮದ ಸನಾಉಲ್ಲಾ ಮಾವಿನ ತೋಟದಲ್ಲಿ ಕೂಡ ಈ ಬಾರಿ ಕೈಗೆ ಬಂದಿದ್ದು ಬಾಯಿಗೆ ಬಾರದ ಸ್ಥಿತಿ. ನಷ್ಟವಾದ ಬೆಳೆಗೆ ಸೂಕ್ತಪರಿಹಾರ ನೀಡಲು ಸಿ. ವಿ. ಗೋಪಾಲ್ ಒತ್ತಾಯಿಸಿದ್ದಾರೆ.