ಒಡಿಶಾದ 32 ಮಕ್ಕಳ ರಕ್ಷಣೆ
ಚಿಕ್ಕಬಳ್ಳಾಪುರ: ಶಿಕ್ಷಣ ಕೊಡಿಸುವುದಾಗಿ ಹೇಳಿ ಸ್ವಯಂ ಸೇವಾ ಸಂಸ್ಥೆಯೊಂದು ಒಡಿಶಾದಿಂದ 32 ಮಕ್ಕಳನ್ನು ಕರೆತಂದು, ಚಿಂತಾಮಣಿ ತಾಲೂಕಿನ ಊಳವಾಡಿಯಲ್ಲಿ ದುಡಿಸಿಕೊಳ್ಳಲಾಗುತ್ತಿತ್ತು. ಈ ಮಕ್ಕಳನ್ನು ರಕ್ಷಿಸಿ ಪುನಾ ಅವರನ್ನು ಪೋಷಕರ ಬಳಿ ಕಳುಹಿಸುವ ವ್ಯವಸ್ಥೆ ಮಾಡಲಾಗುತ್ತಿದೆ ಎಂದು ಜಿಲ್ಲಾ ಮಕ್ಕಳ ರಕ್ಷಣಾ ಸಮಿತಿ ಅಧ್ಯಕ್ಷ ಸುಧಾಕರ್ ತಿಳಿಸಿದ್ದಾರೆ.
ಈ ಕುರಿತು ಸುದ್ದಿಗಾರರಿಗೆ ವಿಷಯ ತಿಳಿಸಿದ ಅವರು, ಚಿಂತಾಮಣಿ ತಾಲೂಕಿನ ಊಲವಾಡಿಯ ಬಾರ್ನ್ ಫೌಂಡೇಷನ್ ಒಡಿಶಾ ಮೂಲದ 32 ಮಕ್ಕಳನ್ನು ಶಿಕ್ಷಣ ಕೊಡಿಸುವ ಭರವಸೆ ನೀಡಿ ಚಿಂತಾಮಣಿಗೆ ಕರೆ ತಂದಿತ್ತು. ಮಕ್ಕಳನ್ನು ಸರ್ಕಾರಿ ಶಾಲೆಗೆ ಕಳುಹಿಸುತ್ತಿತ್ತು. ಈ ನಡುವೆ ಒಡಿಶಾದಲ್ಲಿ ಮಾನವ ಹಕ್ಕುಗಳ ಹೋರಾಟಗಾರರೊಬ್ಬರು ಅಲ್ಲಿನ ಮಾನವ ಹಕ್ಕುಗಳ ಆಯೋಗಕ್ಕೆ ದೂರು ನೀಡಿ, ಬಾರ್ನ್ ಫೌಂಢೇಷನ್ ಸೇವಾ ಸಂಸ್ಥೆ ಮಕ್ಕಳನ್ನು ಬಾಲಕಾರ್ಮಿಕರನ್ನಾಗಿ ದುಡಿಸಿಕೊಳ್ಳಲಾಗುತ್ತಿದೆ ಎಂದು ಆರೋಪಿಸಿದ್ದರು. ಈ ದೂರಿನ ಅನ್ವಯ ಒಡಿಶಾ ಸರ್ಕಾರ, ಪರಿಶೀಲಿಸಿ ವರದಿ ನೀಡಬೇಕು ಎಂದು ಸೂಚಿಸಿತ್ತು. ಈ ಹಿನ್ನೆಲೆಯಲ್ಲಿ ಅಲ್ಲಿನ ಅಧಿಕಾರಿಗಳ ತಂಡ ಇಲ್ಲಿಗೆ ಆಗಮಿಸಿದ್ದರು. ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಮತ್ತು ಮಕ್ಕಳ ರಕ್ಷಣಾ ಘಟಕದ ಅಧಿಕಾರಿಗಳ ಸಂಸ್ಥೆಯ ಕಚೇರಿಗೆ ತೆರಳಿ 20 ಬಾಲಕಿಯರು ಹಾಗೂ 12 ಬಾಲಕರನ್ನು ತಮ್ಮ ವಶಕ್ಕೆ ತೆಗೆದುಕೊಂಡಿದ್ದಾರೆ ಎಂದು ತಿಳಿಸಿದರು.