ಪಠ್ಯ ಸಾಗಣೆಗೆ ಶಿಕ್ಷಕರು ಖರ್ಚು ಮಾಡಬೇಕಿಲ್ಲ
ಕೋಲಾರ: ಪಠ್ಯಪುಸ್ತಕಗಳನ್ನು ಶಾಲೆಗಳಿಗೆ ಸಾಗಣೆ ಮಾಡಲು ವಾಹನ ವ್ಯವಸ್ಥೆ ಮಾಡಿಸಲಾಗಿದೆ. ಯಾವುದೇ ಶಿಕ್ಷಕರು ಸ್ವಂತ ಖರ್ಚಿನಲ್ಲಿ ಸಾಗಣೆ ಮಾಡಬಾರದು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಜಗದೀಶ್ ಸೂಚಿಸಿದ್ದಾರೆ.
ಇತ್ತೀಚೆಗೆ ನಗರದಲ್ಲಿ ನಡೆದ ಶಿಕ್ಷಣ ಅದಾಲತ್‌ನಲ್ಲಿ ಭಾಗವಹಿಸಿದ್ದ ಶಿಕ್ಷಣ ಇಲಾಖೆಯ ಆಯುಕ್ತರಿಗೆ ಕೆಲವರು ಸಮವಸ್ತ್ರ ಮತ್ತು ಪಠ್ಯ ಪುಸಕ್ತಗಳನ್ನು ಶಿಕ್ಷಕರೇ ತಮ್ಮ ಸ್ವಂತ ಹಣದಿಂದ ಶಾಲೆಗಳಿಗೆ ಕೊಂಡೊಯ್ಯುವಂತಾಗಿದೆ ಎಂದು ದೂರಿದ್ದರು. ಆಯುಕ್ತರು ಕ್ರಮಕ್ಕೆ ಸೂಚಿಸಿದ್ದರು. ಆ ಹಿನ್ನೆಲೆಯಲ್ಲಿ ಬಿಇಒ ಅವರು ಪಠ್ಯ ಪುಸ್ತಕ ಸಾಗಾಣೆಗೆ ಶಿಕ್ಷಕರು ತಮ್ಮ ಸ್ವಂತ ಹಣ ಖರ್ಚು ಮಾಡಬೇಕಾಗಿಲ್ಲ. ಕಳೆದ ವರ್ಷ ವರ್ಷ ಶಿಕ್ಷಕರೇ ಸಾಗಾಣೆ ಮಾಡಿದ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಆದೇಶ ಹೊರಡಿಸಲಾಗಿದೆ ಎಂದು ತಿಳಿಸಿದ್ದಾರೆ.
ಈ ಬಾರಿ ಕ್ಲಸ್ಟರ್ ಹಂತದಲ್ಲಿ ಪಠ್ಯ ಪುಸ್ತಕ ತುಂಬಿದ ವಾಹನಗಳು ಸಂಚರಿಸಲಿದ್ದು, ಪ್ರತಿ ಶಾಲೆಯ ಮುಖ್ಯ ಶಿಕ್ಷಕರು ವಾಹನದ ಮಾರ್ಗಸೂಚಿ ನಿಗದಿಯಾದ ಮುನ್ನಾ ದಿನವೇ ತಮ್ಮ ಶಾಲೆಗೆ ಸೂಚಿಸಿದ ಪುಸ್ತಕಗಳನ್ನು ಬಂಡಲ್ ಮಾಡಿ ಇಡಲು ಸೂಚಿಸಲಾಗಿದೆ ಎಂದು ತಿಳಿಸಿದ್ದಾರೆ.