ಬಂಗಾರಪೇಟೆ ತಾಲೂಕಲ್ಲಿ ಅಕ್ರಮ ಮರಳು ಮಾರಾಟ ವಿಪರೀತ!
ಬಂಗಾರಪೇಟೆ: ತಾಲೂಕಿನಲ್ಲಿ ಅಂತರ್ಜಲ ಮಟ್ಟ ಕುಸಿದಿದ್ದು, ಮರಳನ್ನು ಕೆರೆಗಳಿಂದ ತೆಗೆಯದಂತೆ ಜಿಲ್ಲಾಡಳಿತ ಎಚ್ಚರಿಕೆ ನೀಡಿದ್ದರೂ ಮರಳು ಲೂಟಿಗಾರರು ಲೆಕ್ಕಿಸದೆ ಪ್ರತಿದಿನ ಮರಳನ್ನು ಲೂಟಿ ಮಾಡುತ್ತಲೇ ಇದ್ದಾರೆ.
ತಾಲೂಕಿನ ಮಾರ್ಕಂಡೇಯ ಡ್ಯಾಂನಲ್ಲಿ ಕಳೆದ 8ವರ್ಷಗಳಿಂದ ಮಳೆಯಿಲ್ಲದೆ ಡ್ಯಾಂ ಸಂಪೂರ್ಣ ಒಣಗಿದೆ. ಮರಳು ಮಾಫಿಯದವರಿಗೆ ಮರಳನ್ನು ಲೂಟಿ ಮಾಡಲು ಸುಲಭವಾಗಿದೆ. ಪ್ರತಿ ನಿತ್ಯ ಡ್ಯಾಂನಲ್ಲಿ ಹತ್ತಾರು ಟ್ರ್ಯಾಕ್ಟರ್ಗಳಲ್ಲಿ ಮರಳನ್ನು ತುಂಬಿಕೊಂಡು ಮಾರಾಟ ಮಾಡುತ್ತಿದ್ದರೂ ತಾಲೂಕು ಆಡಳಿತ ಮಾತ್ರ ಅತ್ತ ಕಣ್ಣೆತ್ತು ನೋಡುತ್ತಿಲ್ಲ. ಬರೀ ಮಾತಿನಲ್ಲೆ ಮರಳು ಲೂಟಿಯನ್ನು ತಡೆಯುವುದಾಗಿ ಹೇಳುತ್ತಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.ಮತ್ತೊಂದೆಡೆ ಕೆರೆಗಳಿಗೆ ನೀರು ಹರಿದು ಬರಲು ಇರುವ ರಾಜಾ ಕಾಲುವೆಗಳನ್ನು ಕೆಲವುರ ಒತ್ತುವರಿ ಮಾಡಿಕೊಂಡಿದ್ದಾರೆ. ಮರಳು ಲೂಟಿ ಹೆಚ್ಚಾಗುತ್ತಿದ್ದಂತೆ ಕ್ಷೇತ್ರದಲ್ಲಿ ಸಾಮರ್ಥ್ಯಕ್ಕಿಂದಲೂ ಹೆಚ್ಚಾಗಿ ಲಾರಿ ಮತ್ತು ಟ್ರ್ಯಾಕ್ಟರ್ಗಳ ಓಡಾಟವೂ ಹೆಚ್ಚಾಗಿದ್ದು, ರಸ್ತೆಗಳೆಲ್ಲಾ ಹಾಳಾಗುತ್ತಿವೆ. ರಸ್ತೆ ನಿರ್ಮಾಣ ಮಾಡಿದ ಎರಡು ಮೂರು ತಿಂಗಳಲ್ಲೇ ಮತ್ತೆ ಹಳೇ ಸ್ಥಿತಿಗೆ ಬರುವಂತಾಗಿದೆ.
ಅಕ್ರಮ ಮರಳು ಮಾರಾಟದ ವಿರುದ್ಧ ಕ್ರಮಕೈಗೊಳ್ಳುವಂತೆ ಜಿಲ್ಲಾಡಳಿತ ಮತ್ತು ಶಾಸಕ ಎಸ್.ಎನ್.ನಾರಾಯಣಸ್ವಾಮಿ ಅವರು ತಾಲೂಕು ಆಡಳಿತಕ್ಕೆ ಸ್ಪಷ್ಟವಾಗಿ ಸೂಚಿಸಿದ್ದಾರೆ. ಆದರೂ ಇದುವರೆಗೂ ಯಾವುದೇ ಕ್ರಮಕೈಗೊಂಡಿಲ್ಲ. ಆದ್ದರಿಂದ ಜಿಲ್ಲಾಧಿಕಾರಿಗಳು ತಾಲೂಕು ಆಡಳಿತಕ್ಕೆ ಸ್ಪಷ್ಟ ಸೂಚನೆ ನೀಡಿ ಮರಳು ಮಾಫಿಯದವರಿಗೆ ಮೂಗುದಾರ ಹಾಕಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.