ಲಕ್ಷದವರೆಗೂ ಆರ್‌ಟಿಸಿ ಕೃಷಿ ಸಾಲಕ್ಕೆ ಡಿಸಿ ಸೂಚನೆ
ಕೋಲಾರ: ರೈತರಿಗೆ ಆರ್.ಟಿ.ಸಿ ಮೇಲೆ ಒಂದು ಲಕ್ಷದವರೆಗೂ ಬೆಳೆ ಸಾಲ ನೀಡಬೇಕೆಂದು ಜಿಲ್ಲಾಧಿಕಾರಿ ಡಿ.ಕೆ. ರವಿ ರಾಷ್ಟ್ರೀಕೃತ ಬ್ಯಾಂಕಿನ ಅಧಿಕಾರಿಗಳಿಗೆ ಸೂಚಿಸಿದರು.
ಅವರು ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಮಂಗಳವಾರ ಸಂಜೆ ಜೂ. 16ರಿಂದ 21ರವರೆಗೆ ಏರ್ಪಡಿಸಲು ಉದ್ದೇಶಿಸಿರುವ ರೈತ ಮೇಳಕ್ಕೆ ಸಂಬಂಧಿಸಿದಂತೆ ಕರೆದಿದ್ದ ಬ್ಯಾಂಕ್ ಅಧಿಕಾರಿಗಳು, ರೈತರು ಹಾಗೂ ವಿವಿಧ ಇಲಾಖೆ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಒಂದು ಲಕ್ಷದವರೆಗೂ ಸಾಲ ನೀಡಲು ಪಹಣಿ, ಮ್ಯುಟೇಷನ್ ಮತ್ತು ಎನ್ ಕಂ ಮೆಂಬರೆನ್ಸ್ ಪತ್ರ ಪಡೆಯಬೇಕೆಂದು ತಿಳಿಸಿದರಲ್ಲದೆ ರೈತರನ್ನು ಅನಾವಶ್ಯಕವಾಗಿ ಅಲೆದಾಡಿಸಬೇಡಿ ಎಂದರು.
ಜೂ.16ರಂದು ಜಿಲ್ಲಾ ಕೇಂದ್ರದಲ್ಲಿ ಸಮಾರಂಭ ಏರ್ಪಡಿಸಿ ರೈತರಿಗೆ ಸಾಲ ವಿತರಣೆ ಮಾಡಲಾಗುವುದು. ಅದೇ ರೀತಿಯಲ್ಲಿ ಜಿಲ್ಲೆಯಲ್ಲಿರುವ ಎಲ್ಲ ಬ್ಯಾಂಕ್ ಶಾಖೆಗಳು ಜೂ.16ರಂದು ಪ್ರತಿಯೊಂದು ಕನಿಷ್ಠ 25 ಜನ ರೈತರಿಗೆ ಬೆಳೆ ಸಾಲ ನೀಡಬೇಕೆಂದು ತಿಳಿಸಿದರು. ಬ್ಯಾಂಕ್ ಮ್ಯಾನೇಜರ್‌ಗಳಿಗೆ ಜಿಲ್ಲಾ ಆಡಳಿತ ಆಯಾ ಪ್ರದೇಶದಲ್ಲಿರುವ ಕಂದಾಯ ಅಧಿಕಾರಿಗಳು, ಗ್ರಾಮ ಪಂಚಾಯತಿ ಅಧಿಕಾರಿಗಳು ಸಾಲ ಮೇಳ ಯಶಸ್ವಿಯಾಗಲು ಪೂರ್ಣ ಸಹಕಾರ ನೀಡಲಿದ್ದಾರೆಂದು ತಿಳಿಸಿದರು.
ರೈತರು ಸಹ ಲಾಭದಾಯಕ ಬೆಳೆ ಬೆಳೆಯಬೇಕು. ಅದಕ್ಕೆ ಕೃಷಿ ಇಲಾಖೆ ಅಧಿಕಾರಿಗಳ ಸಲಹೆ ಪಡೆದುಕೊಳ್ಳಬೇಕು. ಬೆಳೆ ವಿಮೆ ಸಹಾ ಮಾಡಿಸಬೇಕೆಂದರು. ಕೆನರಾ ಬ್ಯಾಂಕ್ ಲೀಡ್ ಬ್ಯಾಂಕ್ ಮ್ಯಾನೇಜರ್ ಶಿವಶಂಕರ್ ಮಾತನಾಡಿ, ಜಿಲ್ಲೆಯಲ್ಲಿ 2013-14ನೇ ಸಾಲಿನಲ್ಲಿ 462.95 ಕೋಟಿ ಸಾಲವನ್ನು ನೀಡುವ ಗುರಿಯಿತ್ತು. ಆದರೆ 624 ಕೋಟಿ ಸಾಲ ನೀಡಿ ಗುರಿ ಮೀರಿ ಸಾಧನೆ ಮಾಡಲಾಗಿದೆ. ಇದು ಜಿಲ್ಲೆಯ ಕೃಷಿಗೆ ಶೇ. 135ರಷ್ಟು ಪ್ರಗತಿ ಸಾಧಿಸಲಾಗಿದೆ ಎಂದು ಹೇಳಿದರು.
ಜಿಲ್ಲೆಯಲ್ಲಿನ ಎಲ್ಲಾ ಬ್ಯಾಂಕ್ ಶಾಖೆಗಳು ಜೂ.14ರೊಳಗೆ ರೈತರಿಗೆ ಸಾಲ ನೀಡಲು ಮಂಜೂರಾತಿ ಪತ್ರಗಳನ್ನು ಸಿದ್ಧಪಡಿಸಿಕೊಳ್ಳಬೇಕು. ಜೂ.16ರಂದು ಎಲ್ಲ ಬ್ಯಾಂಕ್‌ಗಳು ರೈತರಿಗೆ ಕೃಷಿ ಸಾಲಗಳನ್ನು ವಿತರಣೆ ಮಾಡಬೇಕೆಂದರು.
ಸ್ಟೇಟ್ ಬ್ಯಾಂಕ್ ಆಫ್ ಮೈಸೂರಿನ ಎ.ಜಿ.ಎಂ ದಾಮೋದರ್ ಮಾತನಾಡಿ, ಕೆಲವೊಂದು ರೈತರು ಸಾಲ ತೆಗೆದುಕೊಳ್ಳಲು ಮುಂದೆ ಬರುವುದಿಲ್ಲ. ಅಂತಹ ರೈತರಿಗೆ ಮಾಹಿತಿ ನೀಡಿ ಸಾಲ ನೀಡಬೇಕೆಂದು ತಿಳಿಸಿದರು. ಜಿಲ್ಲೆಯಲ್ಲಿ ಒಣಬೇಸಾಯ ಇರುವುದರಿಂದ ರೈತರಿಗೆ ಡೈರಿ, ರೇಷ್ಮೆ ಇತ್ಯಾದಿ ಚಟುವಟಿಕೆಗಳಿಗೆ ಸಾಲ ನೀಡಬೇಕೆಂದು ತಿಳಿಸಿದರು. ಪ್ರಗತಿ ಗ್ರಾಮೀಣ ಬ್ಯಾಂಕ್ ರೀಜನಲ್ ಮ್ಯಾನೇಜರ್ ರವೀಂದ್ರ ಮಾತನಾಡಿ, ರೈತರಿಗೆ ಸಾಲ ನೀಡುವಾಗ ಪೂರ್ಣವಾಗಿ ಸಾಲ ನೀಡಬೇಕು. ಒಂದು ಲಕ್ಷ ಸಾಲ ನಿಗಧಿ ಇರುವಾಗ 50 ಸಾವಿರದಂತೆ ಸಾಲ ನೀಡಬಾರದು ಹಾಗೂ ರೈತರಿಗೆ ಸುಲಭವಾಗಿ ಒಂದು ಲಕ್ಷದವರೆಗೂ ಸಾಲ ನೀಡಲು ಬ್ಯಾಂಕ್ ಶಾಖೆಗಳ ಮ್ಯಾನೇಜರ್‌ಗಳಿಗೆ ತಿಳಿಸಿದರು.
ಸಭೆಯಲ್ಲಿ ಪ್ರಗತಿಪರ ರೈತ ಚಂದ್ರಶೇಖರ್ ಮಾತನಾಡಿ, ಕೆಲವು ಬ್ಯಾಂಕ್ ಹಲವಾರು ದಾಖಲೆಗಳನ್ನು ಕೇಳಿ ಸಾಲ ನೀಡದೆ ಕಳುಹಿಸುತ್ತಾರೆ. ಇದನ್ನು ಗಮನಿಸಿ ರೈತರೊಂದಿಗೆ ಗೌರವಯುತವಾಗಿ ನಡೆದು ಸಾಲ ಮಂಜೂರು ಮಾಡಬೇಕೆಂದರು. ಜಿಪಂ ಸಿಇಒ ಆರ್. ವಿನೋತ್ ಪ್ರಿಯಾ, ಉಪಕಾರ್ಯದರ್ಶಿ ಬದನೂರು ಇದ್ದರು.