ವಿದ್ಯುತ್ ತಗುಲಿ ಬೆಸ್ಕಾಂ ನೌಕರ ಸಾವು
ಬಾಗೇಪಲ್ಲಿ: ವಿದ್ಯುತ್ ಕಂಬ ರಿಪೇರಿ ಮಾಡುತ್ತಿದ್ದ ಬೆಸ್ಕಾಂ ಇಲಾಖೆಯ ಗುತ್ತಿಗೆ ನೌಕರನಿಗೆ ವಿದ್ಯುತ್ ತಗುಲಿ ಮೃತಪಟ್ಟ ಘಟನೆ ತಾಲೂಕಿನ ಗೂಳೂರು ದೇವಿಕುಂಟೆ ಕೊತ್ತಪಲ್ಲಿ ಗ್ರಾಮದಲ್ಲಿ ನಡೆದಿದೆ. ಅವಘಡಕ್ಕೆ ಬೆಸ್ಕಾಂ ನಿರ್ಲಕ್ಷ್ಯವೇ ಕಾರಣ ಎಂದು ಮೃತನ ಸಂಬಂಧಿಕರು ಪ್ರತಿಭಟನೆ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅಶ್ವತ್ಥ(28) ಮೃತಪಟ್ಟ ನೌಕರು. ಬೆಂಗಳೂರು ಗೋಲ್ಡನ್ ಫೆಸಿಪಿಕೇಷನ್ ಏಜನ್ಸಿ ಸಂಸ್ಥೆಯಿಂದ ಜಂಗಲ್ ಕಟಿಂಗ್ ಗ್ಯಾಂಗ್‌ಮನ್ ಆಗಿ 8 ವರ್ಷಗಳಿಂದ ತಿಮ್ಮಂಪಲ್ಲಿ ಸಬ್ ಸ್ಟೇಷನ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದ. ದೇವಿಕುಂಟೆ ಕೊತ್ತಪಲ್ಲಿ ಬಳಿ ಮಂಗಳವಾರ ಮಧ್ಯಾಹ್ನ ವಿದ್ಯುತ್ ಸಮಸ್ಯೆ ಸರಿಪಡಿಸಲು ಈತ ಕಂಬ ಏರಿದ್ದ. ಆಗ ವಿದ್ಯುತ್ ತಗುಲಿ ಮೃತಪಟ್ಟಿದ್ದಾನೆ. ತಕ್ಷಣ ಜತೆಗಿದ್ದ ಸಹೋದ್ಯೋಗಿಗಳು ಸ್ಥಳೀಯರ ಸಹಕಾರದಿಂದ ಶವವನ್ನು ಕಂಬದಿಂದ ಕೆಳಗಿಳಿಸಿದ್ದಾರೆ. ಈ ಘಟನೆಯಿಂದ ತೀವ್ರ ಆಕ್ರೋಶಗೊಂಡ ಮೃತನ ಸಂಬಂಧಿಕರು ಬೆಸ್ಕಾಂ ಕಚೇರಿ ಮುಂದೆ ಶವವನ್ನಿಟ್ಟು ಪ್ರತಿಭಟನೆ ನಡೆಸಿದರು. ತಕ್ಷಣ ಮೃತನ ಕುಟುಂಬಕ್ಕೆ ಪರಿಹಾರ ನೀಡಬೇಕು ಎಂದು ಪತ್ನಿ ಗಂಗರತ್ನಮ್ಮ ಹಾಗೂ ತಂದೆ ಅವುಲ ನರಸಿಂಹಪ್ಪ ಒತ್ತಾಯಿಸಿದರು. ಈ ಸಂಬಂಧ ಬೆಸ್ಕಾಂ ಎಇಇ ಬಾಲಾಜಿ ಪ್ರತಿಕ್ರಿಯಿಸಿ, ಇಲಾಖೆಯ ತನಿಖಾ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ವರದಿ ನೀಡಿದ ನಂತರ ಇಲಾಖೆ ಮುಖ್ಯ ಇಂಜಿನಿಯರ್ ಅವರು ಮುಂದಿನ ಕ್ರಮಕೈಗೊಳ್ಳುತ್ತಾರೆ ಎಂದರು. ಸಿಪಿಐ ಸಿ.ವಸಂತ್, ಆರಕ್ಷಕ ಉಪ ನಿರೀಕ್ಷಕ ವಿ.ಮುನಿರೆಡ್ಡಿ ಸ್ಥಳಕ್ಕೆ ಭೇಟಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.