ಸಹಕಾರಿ ಕ್ಷೇತ್ರವನ್ನೂ ಹಾಳು ಮಾಡಿದ ಕಾಂಗ್ರೆಸ್
ಚಿಕ್ಕಬಳ್ಳಾಪುರ: ರಾಜಕೀಯ ಸ್ವಾರ್ಥ ಲಾಭಕ್ಕಾಗಿ ಸಹಕಾರಿ ಕ್ಷೇತ್ರದ ಚುನಾವಣೆಯಲ್ಲೂ ಹಣದ ಹೊಳೆ ಹರಿಸಿ ಆಮಿಷಗಳನ್ನೊಡ್ಡುವ ಕೆಲಸಕ್ಕೆ ಕಾಂಗ್ರೆಸ್ ಕೈ ಹಾಕಿ ಸಹಕಾರಿ ಕ್ಷೇತ್ರವನ್ನೂ ಕಲುಷಿತಗೊಳಿಸಿದೆ ಎಂದು ಜೆಡಿಎಸ್ ಜಿಲ್ಲಾಧ್ಯಕ್ಷ, ಕೋಚಿಮುಲ್ ನಿರ್ದೇಶಕ ಕೆ.ವಿ.ನಾಗರಾಜ್ ಟೀಕಿಸಿದರು.
ನಗರದ ಹರ್ಷೋದಯ ಕಲ್ಯಾಣ ಮಂಟಪದಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಹಿಂದೆ ಸಹಕಾರಿ ಕ್ಷೇತ್ರದ ಚುನಾವಣೆಗಳು ಮುಕ್ತವಾಗಿ ಭ್ರಷ್ಟಾಚಾರವಿಲ್ಲದೇ ನಡೆಯುತ್ತಿದ್ದವು. ಸಹಕಾರ ಕ್ಷೇತ್ರದಲ್ಲಿ ರಾಜಕೀಯವನ್ನು ಬೆರೆಸುತ್ತಿರಲಿಲ್ಲ. ಆದರೆ, ಈ ಬಾರಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಹಣದ ಪ್ರಭಾವವನ್ನು ಬಳಸಿತು. ಕ್ಷೇತ್ರದ ಶಾಸಕರ ನೇತೃತ್ವದಲ್ಲಿ ಜೆಡಿಎಸ್ ಸೋಲಿಸಲು ಅನೇಕ ತಂತ್ರಗಳನ್ನು ಹೂಡಲಾಯಿತಾದರೂ ಸಹ ಅವರು ಕೊನೆಗೆ ಯಶಸ್ವಿಯಾಗಲಿಲ್ಲ ಎಂದರು.
ತಾಲ್ಲೂಕಿನ ಎಲ್ಲಾ ಹಾಲು ಉತ್ಪಾದಕರ ಸಂಘಗಳ ಅಧ್ಯಕ್ಷರು ಹಣದ ಆಮಿಷಗಳಿಗೆ ಒಳಗಾಗದೇ ತಮಗೆ ಹೆಚ್ಚಿನ ಮತ ನೀಡುವ ಮೂಲಕ 5 ನೇ ಬಾರಿ ನಿರ್ದೇಶಕರನ್ನಾಗಿ ಆಯ್ಕೆ ಮಾಡಿದ್ದಾರೆ. ತಾಲೂಕಿನಲ್ಲಿ 173 ಹಾಲು ಉತ್ಪಾದಕರ ಸಂಘಗಳಿದ್ದು, ಪಕ್ಷಾತೀತವಾಗಿ ತಾಲ್ಲೂಕಿನಲ್ಲಿ ಸಮಸ್ಯೆ ಇರುವ ಕಡೆ ತೆರಳಿ ಸಹಕಾರ ಸಂಘಗಳನ್ನು ಸ್ಥಾಪಿಸಲಾಯಿತು. ಬೇರೆ ಪ್ರದೇಶಗಳಿಗಿಂತ ಚಿಕ್ಕಬಳ್ಳಾಪುರ ತಾಲೂಕು ಮತ್ತು ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನಲ್ಲಿ ಉತ್ಪಾದನೆಯಾಗುವ ಹಾಲು ಹೆಚ್ಚಿನ ಗುಣಮಟ್ಟದಿಂದ ಕೂಡಿರುತ್ತದೆ. ಇಲ್ಲಿ ಹಾಲಿನ ಗುಣಮಟ್ಟ ಕಾಪಾಡಲು ತಾವು ಸಂಘಗಳೊಡನೆ ನೇರ ಸಂಪರ್ಕವಿಟ್ಟುಕೊಂಡು ಸೂಕ್ತ ಕ್ರಮಗಳನ್ನು ಕೈಗೊಂಡಿರುವುದು ಪ್ರಮುಖ ಕಾರಣವಾಗಿದೆ ಎಂದರು.
ಮಾಜಿ ಶಾಸಕ ಕೆ.ಪಿ.ಬಚ್ಚೇಗೌಡ ಮಾತನಾಡಿದರು. ಪತ್ರಿಕಾಗೋಷ್ಠಿಯಲ್ಲಿ ಜೆಡಿಎಸ್ ಜಿಲ್ಲಾ ಉಪಾಧ್ಯಕ್ಷ ಕೆ.ಟಿ.ನಾರಾಯಣಸ್ವಾಮಿ, ಕೃಷಿಕ ಸಮಾಜದ ಜಿಲ್ಲಾಧ್ಯಕ್ಷ ಚದಲುಪುರ ನಾರಾಯಣಸ್ವಾಮಿ, ತಾಪಂ ಸದಸ್ಯ ವೆಂಕಟನಾರಾಯಣಪ್ಪ, ಕೊಳವನಹಳ್ಳಿ ಮುನಿರಾಜು, ನಗರಸಭೆ ಸದಸ್ಯ ಕಿಸಾನ್ ಕೃಷ್ಣಪ್ಪ, ಪಿ.ಶ್ರೀನಿವಾಸ್ ಮುಂತಾದವರು ಉಪಸ್ಥಿತರಿದ್ದರು.