ಸೇವಾದಳದ ಕಾರ್ಯಕ್ರಮಗಳಿಗೆ ಜನಪ್ರತಿನಿಧಿಗಳ ಸಹಕಾರ ಬೇಕು
ಕೋಲಾರ: ಭಾರತ ಸೇವಾ ದಳದ ಕಾರ್ಯಕ್ರಮಗಳು ಜನರಿಗೆ ತಲುಪುವಂತಾಗಲು ಜನಪ್ರತಿನಿಧಿಗಳ ಸಹಕಾರ ಅತ್ಯಗತ್ಯ ಎಂದು ಜಿಲ್ಲಾ ಕಾರ್ಯಾಧ್ಯಕ್ಷ ಕೆ.ಎಸ್.ಗಣೇಶ್ ಅಭಿಪ್ರಾಯಿಸಿದರು. ಭಾರತ ಸೇವಾದಳ ಜಿಲ್ಲಾ ಸಮಿತಿ ಕಚೇರಿಯಲ್ಲಿ ಇತ್ತೀಚೆಗೆ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸೇವೆಗಾಗಿ ಬಾಳು ಧ್ಯೇಯದ ಭಾರತ ಸೇವಾದಳದ ಕಾರ್ಯ ಚಟುವಟಿಕೆಗಳಲ್ಲಿ ನಗರ ಹಾಗೂ ಗ್ರಾಮೀಣ ಜನಪ್ರತಿನಿಧಿಗಳನ್ನು ಸಕ್ರಿಯವಾಗಿ ಭಾಗವಹಿಸುವಂತೆ ಮಾಡುವ ಮೂಲಕ ಸಾರ್ಥಕ ಸೇವೆಗೆ ಮುಂದಾಗಬೇಕಾಗಿದೆ ಎಂದು ತಿಳಿಸಿದರು. ಈ ಕಾರ್ಯಕ್ರಮದ ಮೊದಲ ಭಾಗವಾಗಿ ಕೋಲಾರ ನಗರಸಭೆಯ ಎಲ್ಲಾ 35 ನಗರಸಭಾ ಸದಸ್ಯರಿಗೂ ಸೇವಾದಳದ ಕಾರ್ಯಚಟುವಟಿಕೆಗಳನ್ನು ಪರಿಚಯಿಸಿ, ಅವರನ್ನು ಸೇವಾ ಕಾರ್ಯದಲ್ಲಿ ಪಾಲ್ಗೊಳ್ಳುವಂತೆ ಮಾಡುವ ಸಲುವಾಗಿ ಜೂ. 7 ರಂದು ಕೋಲಾರ ಪತ್ರರ್ತರ ಭವನದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲು ಸಭೆಯಲ್ಲಿ ನಿರ್ಧರಿಸಲಾಯಿತು. ಭಾರತ ಸೇವಾದಳ ಈ ವರ್ಷವೂ ಪ್ರತಿ ತಾಲೂಕಿನ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕಪಡೆದ ಮೂವರನ್ನು ಆಹ್ವಾನಿಸಿ ಪ್ರತಿಭಾ ಪುರಸ್ಕಾರ ನೀಡುವ ಬಗ್ಗೆಯೂ ನಿರ್ಧಾರ ಕೈಗೊಳ್ಳಲಾಯಿತು. ಪದಾಧಿಕಾರಿಗಳಾದ ವಿ.ಪಿ.ಸೋಮಶೇಖರ್, ಎಸ್.ಸುಧಾಕರ್, ವೈ.ಶಿವಕುಮಾರ್, ಎಂ.ನಾಗರಾಜ್, ಚಾಮುಂಡೇಶ್ವರಿ ದೇವಿ ಸೇರಿ ಅನೇಕರಿದ್ದರು.