ಆಹಾರ ಸಂಸ್ಕರಣೆಗೆ ಗಮನಹರಿಸಿ: ಶಿವಾನಂದಮೂರ್ತಿ
ಕ.ಪ್ರ.ವಾರ್ತೆ ಹುಣಸೂರು ಆ. 1
ಕೃಷಿ ಪ್ರಧಾನವಾದ ನಮ್ಮ ದೇಶದಲ್ಲಿ ಆಹಾರ ಸಂಸ್ಕರಣೆಗೆ ಹೆಚ್ಚಿನ ಮಹತ್ವವಿದ್ದು, ಯುವಕರು ಈ ನಿಟ್ಟಿನಲ್ಲಿ ಕಾರ್ಯಾನ್ಮುಖರಾಗುವಂತೆ ತಹಸೀಲ್ದಾರ್ ಬಿ.ಸಿ. ಶಿವಾನಂದಮೂರ್ತಿ ಕರೆ ನೀಡಿದರು.
ಇಲ್ಲಿನ ಸ್ಫೂರ್ತಿ ಸಂಸ್ಥೆಯ ಕಚೇರಿಯಲ್ಲಿ ಗುರುವಾರ ನಡೆದ ಕಾರ್ಯಕ್ರಮದಲ್ಲಿ ಹೈದರಾಬಾದ್ನ ಭಾರತೀಯ ಉದ್ಯೋಗಶೀಲತಾ ಅಭಿವೃದ್ಧಿ ನಿಗಮ, ರಾಜ್ಯ ಕೃಷಿ ಇಲಾಖೆ ಹಾಗೂ ಸ್ಫೂರ್ತಿ ಸಂಸ್ಥೆಯ ಸಹಯೋಗದಲ್ಲಿ ಆಯೋಜಿಸಿದ್ದ ಆಹಾರ ಸಂಸ್ಕರಣೆಯ ಕುರಿತು 6 ವಾರಗಳ ಕಾಲದ ಉಚಿತ ತರಬೇತಿ ಶಿಬಿರ ಉದ್ಘಾಟಿಸಿ, ಮಾತನಾಡಿ, ದೇಶದಲ್ಲಿ ಇತ್ತೀಚೆಗೆ ಮಾಲ್ ಸಂಸ್ಕೃತಿ ತಲೆ ಎತ್ತಿದೆ. ಆಹಾರ ಸಂಸ್ಕರಣಾ ಕಾರ್ಯವು ಹಿಂದೆಂದಿಗಿಂತಲೂ ಹೆಚ್ಚು ಪ್ರಾಶಸ್ತ್ಯ ಪಡೆದಿದೆ ಎಂದು ಹೇಳಿದರು.
ಉದ್ಯಮಶೀಲತಾ ಅಭಿವೃದ್ಧಿ ನಿಗಮದ ರಾಜ್ಯ ಸಂಚಾಲಕ ಡಾ.ಎಂ.ಪಿ. ವರ್ಷ ಮಾತನಾಡಿ, ಹಸಿರು ಕ್ರಾಂತಿಯ ಪರಿಣಾಮ ದೇಶ ಇಂದು ಕೃಷಿ ಉತ್ಪನ್ನದಲ್ಲಿ ವಿಶ್ವದಲ್ಲೆ ಎರಡನೇ ಸ್ಥಾನದಲ್ಲಿದೆ. ಕೃಷಿ ಉತ್ಪನ್ನದ ವಿಭಾಗವಾದ ಹಾಲು ಉತ್ಪನ್ನದಲ್ಲಿ ಮೊದಲ ಸ್ಥಾನ, ತರಕಾರಿ ಉತ್ಪನ್ನದಲ್ಲಿ ದ್ವಿತೀಯ ಹಾಗೂ ಸಮುದ್ರ ಉತ್ಪನ್ನಗಳಲ್ಲಿ ಮೂರನೇ ಸ್ಥಾನದಲ್ಲಿದೆ.
ವಿಪರ್ಯಾಸವೆಂದರೆ ನಾವು ಉತ್ಪಾದಿಸುವ ಕೃಷಿ ಉತ್ಪನ್ನಗಳ ಸಮರ್ಪಕ ಸಂಸ್ಕರಣೆ ಇಲ್ಲದೆ ಶೇ. 35ಕ್ಕೂ ಹೆಚ್ಚು ಉತ್ಪನ್ನಗಳು ನಾಶವಾಗುತ್ತಿವೆ. ಸರ್ಕಾರದ ಅಂದಾಜಿನಂತೆ ಪ್ರತಿ ವರ್ಷ 50 ಸಾವಿರ ಕೋಟಿಗಳಿಗೂ ಅಧಿಕ ಮೌಲ್ಯದ ಕೃಷಿ ಉತ್ಪನ್ನಗಳು ಹಾಳಾಗುತ್ತಿವೆ. ಇದಕ್ಕೆ ಪ್ರಮುಖ ಕಾರಣ ಸಾರಿಗೆ ಅವ್ಯವಸ್ಥೆ, ಉಗ್ರಾಣದ ಕೊರತೆ, ಮಾರುಕಟ್ಟೆ ಕೊರತೆ ಹಾಗೂ ಕೃಷಿ ಉತ್ಪನ್ನಗಳನ್ನು ಮೌಲ್ಯಯುತ ಉತ್ಪನ್ನಗಳನ್ನಾಗಿ ಮಾಡುವ ತಂತ್ರಜ್ಞಾನದ ಅಲಭ್ಯದಿಂದಾಗಿ ಆಗುತ್ತಿದೆ ಎಂದು ತಿಳಿಸಿದರು.
ಸ್ಫೂರ್ತಿ ಸಂಸ್ಥೆಯ ಮುಖ್ಯಸ್ಥೆ ಸುಧಾಮಣಿ, ಸಮಾಜ ಸೇವಕಿ ವಿಜಯಾಕರೀಗೌಡ ಮಾತನಾಡಿದರು. ಮೂವತ್ತಕ್ಕೂ ಹೆಚ್ಚು ಶಿಬಿರಾರ್ಥಿಗಳು ಭಾಗವಹಿಸಿದ್ದರು.