ಇಂದಿನಿಂದ ಕೈಗಾರಿಕಾ ವಸ್ತು ಪ್ರದರ್ಶನ
ಕ.ಪ್ರ.ವಾರ್ತೆ ಮೈಸೂರು ಆ. 1
ಈಸೀಸರ್ಚ್ ಇನ್ಫೋಮೀಡರೀ ಸಂಸ್ಥೆಯು ಮೈ ಇಂಡ್ ಎಕ್ಸ್ಪೋ ಎಂಬ ಕೈಗಾರಿಕಾ ವಸ್ತುಪ್ರದರ್ಶನ ಮತ್ತು ಮಾರಾಟಗಾರರ ಅಭಿವೃದ್ಧಿ ಕಾರ್ಯಕ್ರಮವನ್ನು ಆ. 2 ರಿಂದ 4 ರವರೆಗೆ ಹೆಬ್ಬಾಳು ಕೈಗಾರಿಕಾ ಪ್ರದೇಶದಲ್ಲಿರುವ ಶುಭೋದಿನಿ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದೆ.
ಆ. 2ರ ಬೆಳಗ್ಗೆ 9.30ಕ್ಕೆ ನಡೆಯುವ ಉದ್ಘಾಟನಾ ಸಮಾರಂಭದಲ್ಲಿ ಸಂಸದ ಎಚ್. ವಿಶ್ವನಾಥ್, ಶಾಸಕರಾದ ವಾಸು, ಎಂ.ಕೆ. ಸೋಮಶೇಖರ್, ಬಿಐಎ ಅಧ್ಯಕ್ಷ ದಯಾನಂದ ರೆಡ್ಡಿ, ಎಫ್ಕೆಸಿಸಿಐ ಅಧ್ಯಕ್ಷ ಆರ್. ಶಿವಕುಮಾರ್, ಎಂಸಿಸಿಐ ಅಧ್ಯಕ್ಷ ಸುಧಾಕರ ಶೆಟ್ಟಿ, ಉದ್ಯಮಿಗಳಾದ ಆರ್. ಗುರು, ಡಾ.ಬಿ.ಆರ್. ಪೈ, ವಕೀಲ ಹರೀಶ್ಕುಮಾರ್ ಹೆಗ್ಡೆ, ಕಾರ್ಪೋರೇಷನ್ ಬ್ಯಾಂಕಿನ ಡಿಜಿಎಂ ಇ.ಎಸ್. ನಾಗರಾಜ ಉಡುಪ ಅತಿಥಿಗಳಾಗಿ ಭಾಗವಹಿಸುವರು ಎಂದು ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಎಸ್. ಸೋಮಶೇಖರ್ ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಈ ವಸ್ತುಪ್ರದರ್ಶನದಲ್ಲಿ ಬೃಹತ್ ಮತ್ತು ಸಣ್ಣ ವಲಯದ ಎಲ್ಲಾ ಕೈಗಾರಿಕೆಗಳು, ಬ್ಯಾಂಕುಗಳು, ಸರ್ಕಾರಿ ಮತ್ತು ಸರ್ಕಾರಿ ಸ್ವೌಮ್ಯದ ಸಂಸ್ಥೆಗಳು ಪಾಲ್ಗೊಳ್ಳುತ್ತಿವೆ. ನೂರಕ್ಕೂ ಹೆಚ್ಚಿನ ವ್ಯಾಪಾರ ಸಂಸ್ಥೆಗಳು ಅಲ್ಲದೆ 15 ಸಾವಿರಕ್ಕೂ ಹೆಚ್ಚಿನ ವೀಕ್ಷಕರು ಭಾಗವಹಿಸುವ ನಿರೀಕ್ಷೆ ಇದೆ. ಈ ಪ್ರದರ್ಶನವು ಬೆಳಗ್ಗೆ 9.30 ರಿಂದ ಸಂಜೆ 6.30 ರವರೆಗೆ ನಡೆಯಲಿದೆ ಎಂದರು.
ಸಂಸ್ಥೆಯ ನಿರ್ದೇಶಕಿ ಎಸ್. ಶ್ರೀವಿದ್ಯಾ, ಶುಭೋದಿನಿ ಮಾಲೀಕ ಅಭಿಷೇಕ್, ಚಿರಾಗ್ ಆಡ್ಸ್ನ ಎಂಡಿ ವಿವೇಕ್ ಇದ್ದರು.