ಖಗೋಳ ಕ್ಲಬ್ ಸ್ಥಾಪನೆಗೆ ಮುಂದಾಗಿ
ಕ.ಪ್ರ.ವಾರ್ತೆ ಮೈಸೂರು ಆ. 1
ಯುವ ವಿಜ್ಞಾನಿಗಳು ಖಗೋಳ ಕ್ಲಬ್ ಸ್ಥಾಪನೆಗೆ ಮುಂದಾಗಿ ಎಂದು ಭಾರತೀಯ ಖಗೋಳ ಭೌತಶಾಸ್ತ್ರ ಸಂಸ್ಥೆಯ ನಿರ್ದೇಶಕ ಡಾ. ಪಿ. ಶ್ರೀಕುಮಾರ್ ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಮೈಸೂರು ವಿವಿಯ ಭೌತಶಾಸ್ತ್ರ ಅಧ್ಯಯನ ವಿಭಾಗವು ಮಾನಸಗಂಗೋತ್ರಿಯ ಸಂಸ್ಥೆಯಲ್ಲಿ ನೂತನವಾಗಿ ಕಲ್ಪಿಸಿರುವ ಟೆಲಿಸ್ಕೋಪ್ ಸೌಲಭ್ಯಕ್ಕೆ ಗುರುವಾರ ಚಾಲನೆ ನೀಡಿ ಮಾತನಾಡಿದರು.
ಖಗೋಳದಲ್ಲಿ ನಡೆಯುವ ವಿಸ್ಮಯ ಅಧ್ಯಯನ ಮಾಡಬೇಕಾದರೆ ಹಾಗೂ ಅಲ್ಲಿನ ಬಾಹ್ಯಾಕಾಶದ ಚಲನವಲನ ಕಂಡು ಹಿಡಿಯಬೇಕಾದರೆ ಟೆಲಿಸ್ಕೋಪ್ ಅಗತ್ಯ. ಇಂತಹ ವಿಚಾರದಲ್ಲಿ ತಮ್ಮ ಜ್ಞಾನ ಬೆಳಸಿಕೊಳ್ಳಬೇಕಾದರೆ ವಿದ್ಯಾರ್ಥಿಗಳು ಖಗೋಳ ಕ್ಲಬ್ ಸ್ಥಾಪಿಸುವ ಮೂಲಕ ಪರಸ್ಪರ ಚರ್ಚೆ ನಡೆಸಿ ತಮ್ಮ ಜ್ಞಾನ ವಿಸ್ತಾರ ಮಾಡಿಕೊಳ್ಳಬೇಕು ಎಂದರು.
ಸುಮಾರು 400 ವರ್ಷಗಳ ಹಿಂದೆ ಪ್ರಪ್ರಥಮ ಬಾರಿಗೆ ಗೆಲಿಲಿಯೋ ಟೆಲಿಸ್ಕೋಪ್ ಕಂಡು ಹಿಡಿದ ಪರಿಣಾಮ ಆಕಾಶಕಾಯದಲ್ಲಿನ ವಿಸ್ಮಯವನ್ನು ಹತ್ತಿರದಿಂದ ವೀಕ್ಷಿಸಲು ಸಾಧ್ಯವಾಯಿತು. ಈ ಸಾಧನವು ಯುವ ಸಂಶೋಧನಾ ವಿಜ್ಞಾನಿಗಳಿಗೆ ಸಾಮಾನ್ಯ ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ಸಹಕಾರಿಯಾಗಲಿದೆ ಎಂದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಮೈಸೂರು ವಿವಿ ಕುಲಪತಿ ಪ್ರೊ. ಕೆ.ಎಸ್. ರಂಗಪ್ಪ, ವಿದ್ಯಾರ್ಥಿಗಳಗಿ ಅನುಕೂಲವಾಗಲೆಂದು ವಿವಿಯು ಅಗತ್ಯ ನೆರವು ಒದಗಿಸಿ ಈ ಸೌಲಭ್ಯ ಕಲ್ಪಿಸಿದೆ. ಇದನ್ನು ವಿದ್ಯಾರ್ಥಿಗಳು ಸದುಪಯೋಗಪಡಿಸಿಕೊಳ್ಳಬೇಕು ಎಂದರು.
ಯುಪಿಎ ಯೋಜನಾ ನಿರ್ದೇಶಕ ಪ್ರೊ. ಕೆ. ಬೈರಪ್ಪ, ವಿಭಾಗದ ಅಧ್ಯಕ್ಷ ಡಾ. ಆರ್. ಸೋಮಶೇಖರ್ ಇದ್ದರು.