ತಾಯಿ ಎದೆಹಾಲು ಸರ್ವಶ್ರೇಷ್ಠ...
ಕ.ಪ್ರ.ವಾರ್ತೆ ಮೈಸೂರು ಆ. 1
ವಿಶ್ವ ಸ್ತನ್ಯಪಾನ ಸಪ್ತಾಹದ ಅಂಗವಾಗಿ ಇಲ್ಲಿನ ವಿವಿಧ ಸಂಘ- ಸಂಸ್ಥೆಗಳು ಉಪನ್ಯಾಸ ಹಾಗೂ ಮತ್ತಿತರ ಅರಿವು ಕಾರ್ಯಕ್ರಮಗಳನ್ನು ಗುರುವಾರ ಏರ್ಪಡಿಸಿದ್ದವು.
ಫ್ಯಾಮಿಲಿ ಪ್ಲಾನಿಂಗ್ ಅಸೋಸಿಯೇಷನ್ ಆಫ್ ಇಂಡಿಯಾ ಮೈಸೂರು ಶಾಖೆ ಹಾಗೂ ಇನ್ನರ್ವ್ಹೀಲ್ ಕ್ಲಬ್ ಆಫ್ ಮೈಸೂರು ಸಂಯುಕ್ತಾಶ್ರಯದಲ್ಲಿ ನಜರಬಾದಿನ ಸರ್ಕಾರಿ ಪೀಪಲ್ಸ್ ಪಾರ್ಕ್ ಕಾಲೇಜಿನಲ್ಲಿ ಗುರುವಾರ ವಿಶ್ವ ಸ್ತನ್ಯಪಾನ ಸಪ್ತಾಹದ ಅಂಗವಾಗಿ ಏರ್ಪಡಿಸಿದ್ದ ಉಪನ್ಯಾಸದಲ್ಲಿ ಸ್ತ್ರೀ ರೋಗ ತಜ್ಞೆ ಡಾ. ಕೆ.ವಿ. ಲಕ್ಷ್ಮೀದೇವಿ ಸ್ತನ್ಯಪಾನ ಮಹತ್ವ ಕುರಿತು ಮಾತನಾಡಿದರು.
ಹುಟ್ಟುವ ಪ್ರತಿಯೊಂದು ಮಗುವಿಗೂ ತಾಯಿ ತನ್ನ ಎದೆ ಹಾಲನ್ನು ಮೂರು ವರ್ಷದವರೆಗೆ ಕಡ್ಡಾಯವಾಗಿ ಕುಡಿಸಬೇಕು. ತಾಯಿಯ ಹಾಲಿನಲ್ಲಿ ಪೌಷ್ಟಿಕಾಂಶ ಇರುವುದರಿಂದ ಅದು ಮಗುವಿನ ಬೆಳವಣಿಗೆಗೆ ಹಾಗೂ ರೋಗ ತಡೆಗಟ್ಟುವಲ್ಲಿ ಸಹಾಯಕವಾಗಲಿದೆ ಎಂದರು.
ತಾಯಿ ಹಾಗೂ ಮಗುವಿನ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸುವುದು ಅವಶ್ಯಕ. ಮಕ್ಕಳ ಆರೈಕೆಯಲ್ಲಿ ವ್ಯತ್ಯಾಸ ಕಂಡು ಬಂದಿರುವ ಹಿನ್ನೆಲೆಯಲ್ಲಿ ಅಪೌಷ್ಟಿಕತೆ ಹೆಚ್ಚಾಗಿದೆ ಎಂದ ಅವರು, ಕಾಲೇಜಿನ ವಿದ್ಯಾರ್ಥಿನಿಯರು ಮುಂದಿನ ದಿನಗಳಲ್ಲಿ ತಾಯಿ ಆಗುವುದರಿಂದ ಎದೆ ಹಾಲಿನ ಮಹತ್ವ ಅರಿಯಬೇಕು ಎಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಎಫ್ಪಿಎ ಮೈಸೂರು ಶಾಖೆ ಅಧ್ಯಕ್ಷ ಮಡ್ಡೀಕೆರೆ ಗೋಪಾಲ್, ಆಸ್ಪತ್ರೆ ಸ್ಥಾಪಿಸಿ ಮಹಿಳೆಯರ ಆರೋಗ್ಯಕ್ಕೆ ಸೇವೆ ಸಲ್ಲಿಸುವುದರ ಜತೆಗೆ ಕಳೆದ ಅನೇಕ ವರ್ಷಗಳಿಂದ ಎಫ್ಪಿಎ ಜಾಗೃತಿ ಕಾರ್ಯ ನಿರ್ವಹಿಸುತ್ತಿದೆ. ಪ್ರತಿವರ್ಷ ಒಂದೊಂದು ಕಾಲೇಜಿನಲ್ಲಿ ಈ ಕಾರ್ಯಕ್ರಮ ಹಮ್ಮಿಕೊಂಡು ಬರಲಾಗುತ್ತಿದೆ. ಇದರ ಸದುಪಯೋಗ ಪಡೆದು, ಅಗತ್ಯ ಮಾಹಿತಿಯನ್ನು ಜೀವನದಲ್ಲಿ ಅಳವಡಿಸಕೊಳ್ಳಬೇಕು ಎಂದರು.
ಕಾರ್ಯಕ್ರಮವನ್ನು ಇನ್ನರ್ವ್ಹೀಲ್ ಕ್ಲಬ್ ಆಫ್ ಮೈಸೂರು ಅಧ್ಯಕ್ಷೆ ಜ್ಯೋತಿ ಮುಖೇಶ್ ಉದ್ಘಾಟಿಸಿದರು.
ಕಾಲೇಜಿನ ಪ್ರಾಂಶುಪಾಲ ಪಿ.ಟಿ. ಅಶೋಕ್. ಎನ್ಎಸ್ಎಸ್ ಅಧಿಕಾರಿ ಮುಬಿನ್ ತಾಜ್ ಹಾಗೂ ಎಫ್ಪಿಎ ಉಪಾಧ್ಯಕ್ಷೆ ಜಯಶ್ರೀ ಎಂ. ಅರಸ್ ಇದ್ದರು.
ಜೆಎಸ್ಎಸ್ ನರ್ಸಿಂಗ್ಕಾಲೇಜು: ಸ್ತನ್ಯಪಾನದ ಮಹತ್ವ ಮತ್ತು ಅಭ್ಯಾಸ ಕುರಿತು ಆರೋಗ್ಯ ಪ್ರದರ್ಶನ ಹಾಗೂ ಚಲನಚಿತ್ರ ಪ್ರದರ್ಶನವನ್ನು ಜೆಎಸ್ಎಸ್ ಆಸ್ಪತ್ರೆಯಲ್ಲಿ ಗುರುವಾರ ಏರ್ಪಡಿಸಲಾಗಿತ್ತು.
ವಿಶ್ವ ಸ್ತನ್ಯಪಾನ ಸಪ್ತಾಹದ ಅಂಗವಾಗಿ ಜೆಎಸ್ಎಸ್ ನರ್ಸಿಂಗ್ ಕಾಲೇಜು ವತಿಯಿಂದ ಬಾಣಂತಿಯರ ಒಳರೋಗಿ ವಿಭಾಗದಲ್ಲಿ ಏರ್ಪಡಿಸಿದ್ದ ಈ ಕಾರ್ಯಕ್ರಮವನ್ನು ಆಸ್ಪತ್ರೆಯ ಮಕ್ಕಳ ವಿಭಾಗದ ಮುಖಸ್ಥ ಡಾ. ನಾರಾಯಣಪ್ಪ ಉದ್ಘಾಟಿಸಿದರು.
ಕಾಲೇಜಿನ ಪ್ರಾಂಶುಪಾಲೆ ಶೀಲಾ ವಿಲಿಯಮ್ಸ್ ಇದ್ದರು. ಈ ಸಂದರ್ಭದಲ್ಲಿ ಆರೋಗ್ಯ ಪ್ರದರ್ಶನ ಹಾಗೂ ಚಲನಚಿತ್ರ ಪ್ರದರ್ಶಿಸಿ ಮಹಿಳೆಯರಿಗೆ ಅರಿವು ಮೂಡಿಸಲಾಯಿತು.
ಭಾರತೀಯ ಮಕ್ಕಳತಜ್ಞರ ಅಕಾಡೆಮಿ: ಭಾರತೀಯ ಮಕ್ಕಳತಜ್ಞರ ಅಕಾಡೆಮಿಯು ಇಲ್ಲಿನ ಅಗ್ರಹಾರದ ಜೆಎಸ್ಎಸ್ ಆಸ್ಪತ್ರೆಯ ಡಾ. ರಾಜೇಂದ್ರ ಭವನದಲ್ಲಿ ವಿಶ್ವ ಸ್ತನ್ಯಪಾನ ಸಪ್ತಾಹದ ಅಂಗವಾಗಿ ಉಪನ್ಯಾಸ ಕಾರ್ಯಕ್ರಮ ನಡೆಸಿತು. ಎದೆಹಾಲು ತಾಯಂದಿರಿಗೆ ಸಹಕಾರಿ ಎಂಬ ವಿಷಯ ಕುರಿತು ಜೆಎಸ್ಎಸ್ ಮಕ್ಕಳ ವಿಭಾಗದ ಮುಖ್ಯಸ್ಥ ಡಾ. ನಾರಾಯಣ್ಪಪ್ಪ ಮಾತನಾಡಿದರು.
ಪತ್ರಿಕೋದ್ಯಮಿ ರಾಜಶೇಖರ ಕೋಟಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಎಸ್.ಎಂ. ಮಾಲೇಗೌಡ ಮುಖ್ಯ ಅತಿಥಿಯಾಗಿದ್ದರು. ಸಂಸ್ಥೆ ಅಧ್ಯಕ್ಷ ಡಾ. ಕೆ. ಜಗದೀಶ್ಕುಮಾರ್, ಡಾ. ಎಚ್.ಆರ್. ಭಕ್ತವತ್ಸಲ ಹಾಗೂ ಖಜಾಂಚಿ ಡಾ. ಕೆ.ಬಿ. ಚೇತಕ್ ಇದ್ದರು.