ವೈದ್ಯರು ಸೇವಾ ಮನೋಭಾವ ಬೆಳೆಸಿಕೊಳ್ಳಲಿ
ಕ.ಪ್ರ.ವಾರ್ತೆ ಮೈಸೂರು ಆ. 1
ವೈದ್ಯರು ವ್ಯಾಪಾರಿ ಧೋರಣೆ ಬದಿಗಿಟ್ಟು ಸೇವಾ ಮನೋಭಾವ ಹೆಚ್ಚಿಸಿಕೊಳ್ಳಬೇಕಾದ ಅನಿವಾರ್ಯತೆ ಇದೆ ಎಂದು ಆಯುರ್ವೇದ ತಜ್ಞ ವೈದ್ಯ ಡಾ. ಸಿ.ಎಸ್. ಅನಿಲ್ಕುಮಾರ್ ಅಭಿಪ್ರಾಯಪಟ್ಟರು.
ಲಯನ್ಸ್ ಐಕಾನ್ಸ್ ಸಂಸ್ಥೆಯು ಆಯೋಜಿಸಿದ್ದ ವೈದ್ಯ ಮಾಸಾಚರಣೆಯಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿ, ವೈದ್ಯರಿಗೆ ಸಮಾಜದಲ್ಲಿರುವ ಸ್ಥಾನಮಾನ ಬಹಳ ದೊಡ್ಡದು. ಅದನ್ನು ನಾವು ಉಳಿಸಿಕೊಳ್ಳಬೇಕಾಗಿದೆ. ಸನ್ಮಾನದ ಮೂಲಕ ಮತ್ತೊಮ್ಮೆ ಎಚ್ಚರಿಸಿದ್ದೀರಿ ಎಂದು ಹೇಳಿದರು. ಶಸ್ತ್ರ ಚಿಕಿತ್ಸಾ ತಜ್ಞ ಡಾ. ಸಿದ್ದೇಶ್ ಆರಾಧ್ಯಮಠ್ ಸನ್ಮಾನ ಸ್ವೀಕರಿಸಿ ಮಾತನಾಡಿ, ಮೊಟ್ಟಮೊದಲು ಶಸ್ತ್ರ ಚಿಕಿತ್ಸೆ ಪ್ರಾರಂಭಗೊಂಡಿದ್ದೆ ಆಯುರ್ವೇದ ಪದ್ಧತಿಯಲ್ಲಿ ಎಂದು ಉದಾಹರಿಸಿದರು. ಶಲ್ಯ ತಂತ್ರ ಪದ್ಧತಿಗೆ ಅಲೋಪಥಿಯವರು ಶಸ್ತ್ರ ಚಿಕಿತ್ಸೆ ಎಂದು ಹೇಳುತ್ತಾರೆ. ಆಯುರ್ವೇದದ ಮೂಲಕ ಶಸ್ತ್ರ ಚಿಕಿತ್ಸೆ ಮಾಡುತ್ತೇನೆ ಎಂದು ಹೇಳಿದಾಗ, ಭಾರತೀಯ ವೈದ್ಯಕೀಯ ಮಂಡಳಿಯೇ ಸಂದೇಹ ವ್ಯಕ್ತಪಡಿಸಿತ್ತು ಎಂದು ತಿಳಿಸಿದರು. ಅನ್ವೇಷಣೆ ಶಿರೋನಾಮೆಯಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಬೆಂಗಳೂರಿನ ಅಲೆಕ್ಸಾಂಡರ್ ವಿಲ್ಸನ್ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು. ಐಕಾನ್ ಅಧ್ಯಕ್ಷ ಸಿ.ಸಿ. ನರೇಶ್ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಪುಟ್ಟಸ್ವಾಮಿ ವಂದಿಸಿದರು. ಪತ್ರಕರ್ತ ರವೀಂದ್ರ ಜೋಶಿ ನಿರೂಪಿಸಿದರು.