ಕಡೆ ಆಷಾಢ ಪೂಜೆ: ಚಾಮುಂಡಿ ದರ್ಶನಕ್ಕೆ ಹರಿದು ಬಂತು ಭಕ್ತ ಸಾಗರ
ಮೈಸೂರು: ನಾಡಿನ ಅಧಿದೇವತೆ ಚಾಮುಂಡೇಶ್ವರಿ ಅಮ್ಮನವರ ಸನ್ನಿಧಿಯಲ್ಲಿ ಆಯೋಜಿಸಿದ್ದ ಆಷಾಢ ಮಾಸದ ವಿಶೇಷ ಪೂಜೆಯ ಅಂಗವಾಗಿ ಶುಕ್ರವಾರ ಅಧಿಕ ಸಂಖ್ಯೆಯಲ್ಲಿ ಭಕ್ತರು ನೆರೆದು ದೇವಿಯ ದರ್ಶನ ಪಡೆದರು. ಕಡೇ ಶುಕ್ರವಾರದ ಅಂಗವಾಗಿ ಅಮ್ಮನವರಿಗೆ ಅಭಿಷೇಕ, ವಿಶೇಷ ಅಲಂಕಾರ ಮಾಡಲಾಗಿತ್ತು. ಈ ಹಿಂದಿನ ವಾರಗಳಲ್ಲಿ ದಾಳಿಂಬೆ, ದ್ರಾಕ್ಷಿ ಮುಂತಾದ ಹಣ್ಣುಗಳಿಂದ ಶೃಂಗರಿಸಲಾಗಿತ್ತು. ಆದರೆ, ಈ ಬಾರಿ ಮೂಸಂಬಿ ಬಳಸಿ ಮಾಡಿದ್ದ ಹೂವಿನ ಅಲಂಕಾರ ಆಲಯದ ಅಂದಕ್ಕೆ ಮೆರಗು ನೀಡಿತ್ತು.
ಎಂದಿನಂತೆ ಮುಂಜಾನೆಯಿಂದಲೇ ಸರತಿ ಸಾಲಿನಲ್ಲಿ ನಿಂತು ಭಕ್ತರು ಅಮ್ಮನವರ ದರ್ಶನ ಪಡೆದರು. ಸಾಮಾನ್ಯ ದರ್ಶನದ ಜತೆಗೆ 30 ಹಾಗೂ 100 ಪ್ರವೇಶದ ವಿಶೇಷ ದರ್ಶನಕ್ಕೂ ಅಸಂಖ್ಯಾತ ಭಕ್ತ ಸಮೂಹ ನೆರೆದಿತ್ತು. ದರ್ಶನಕ್ಕೆ ಶುಲ್ಕ ಪಾವತಿಸಿದ ಹಾಗೂ ಗಣ್ಯ ಭಕ್ತರಿಗಾಗಿ ಪ್ರತ್ಯೇಕ ವ್ಯವಸ್ಥೆ ಕಲ್ಪಿಸಲಾಗಿತ್ತು. ಮಾಜಿ ಮುಖ್ಯಮಂತ್ರಿ ಹಾಗೂ ಕೆಜೆಪಿ ವರಿಷ್ಠ ಬಿ.ಎಸ್. ಯಡಿಯೂರಪ್ಪ, ಮಾಜಿ ಸಚಿವೆ ಶೋಭಾ ಕರಂದ್ಲಾಜೆ, ಬೆಂಗಳೂರಿನ ಕೆ.ಆರ್. ಪುರಂ ಶಾಸಕ ಭೈರತಿ ಬಸವರಾಜು, ಚಲನಚಿತ್ರ ನಟ ಶಶಿಕುಮಾರ್, ನಿರ್ಮಾಪಕ ಎಸ್.ಎ. ಚೆನ್ನೇಗೌಡ, ಎಂಡಿಎ ಆಯುಕ್ತ ಡಾ. ಸಿ.ಜಿ. ಬೆಟ್ಸೂರ್ ಮಠ್, ಜಿಲ್ಲಾ ಉಸ್ತುವಾರಿ ಸಚಿವ ವಿ. ಶ್ರೀನಿವಾಸಪ್ರಸಾದ್ ಅವರ ಪತ್ನಿ ಭಾಗ್ಯಲಕ್ಷ್ಮೀ ಮುಂತಾದ ಗಣ್ಯರು ದೇವಿಯ ದರ್ಶನ ಪಡೆದರು.