ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಕಲಾವಿದರಲ್ಲಿ ವೃತ್ತಿಪರ ಶಿಸ್ತು ಅವಶ್ಯ: ಮಂಡ್ಯ ರಮೇಶ್

Srinivasa Murthy VN
Updated On : 3 Aug 2013, 12:38 pm

ಕ.ಪ್ರ.ವಾರ್ತೆ ಮೈಸೂರು ಆ. 2
ಹವ್ಯಾಸಿ ರಂಗ ಕಲಾವಿದರಲ್ಲಿಯೂ ವೃತ್ತಿಪರ ಶಿಸ್ತು ಅವಶ್ಯಕ ಎಂದು ರಂಗ ನಿರ್ದೇಶಕ ಹಾಗೂ ಚಿತ್ರನಟ ಮಂಡ್ಯ ರಮೇಶ್ ಹೇಳಿದರು. ದೇಸಿರಂಗ ಸಾಂಸ್ಕೃತಿಕ ಸಂಸ್ಥೆಯು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ರಂಗ ಮತ್ತು ನೃತ್ಯ ತರಬೇತಿ ಶಿಬಿರದ ಸಮಾರೋಪದ ಅಂಗವಾಗಿ ಇಲ್ಲಿನ ರಂಗಾಯಣದ ಶ್ರೀರಂಗದಲ್ಲಿ ಆಯೋಜಿಸಿರುವ ಎರಡು ದಿನಗಳ ನಾಟಕೋತ್ಸವವನ್ನು ಶುಕ್ರವಾರ ಉದ್ಘಾಟಿಸಿ ಮಾತನಾಡಿದರು. ರಾಜ್ಯದಲ್ಲಿ ಹವ್ಯಾಸಿ ರಂಗಭೂಮಿಯ ಚಟುವಟಿಕೆಗಳು ನಿರಂತವಾಗಿ ನಡೆಯುತ್ತಿದೆ. ಆದರೆ, ಕಲಾವಿದರಲ್ಲಿ ಸೊಗಸಾಗಿ ಅಭಿನಯಿಸುವಲ್ಲಿ ಹಾಗೂ ರಂಗದ ಕೆಲಸ ಮಾಡುವಲ್ಲಿ ವೈಜ್ಞಾನಿಕ ಮನೋಭಾವದ ಕೊರತೆಯಿದೆ. ಆದ್ದರಿಂದ ವೃತ್ತಿ ರಂಗಭೂಮಿಯಲ್ಲಿ ಇರುವಂತೆ ವೃತ್ತಿಪರ ಶಿಸ್ತು ಹವ್ಯಾಸಿ ಕಲಾವಿದರಲ್ಲಿ ಅವಶ್ಯಕ ಎಂದರು.
ರಂಗ ವೇದಿಕೆಯ ಮೇಲೆ ಅಭಿನಯಿಸಲು, ಹಾಡಲು ಹಾಗೂ ನೃತ್ಯ ಮಾಡಲು ಬಯಸುವ ತರುಣ ಪೀಳಿಗೆ ರಂಗದ ಕಸ ಹೊಡೆಯುವ ಅಥವಾ ಇನ್ನಿತರ ರಂಗದ ಕೆಲಸ ಮಾಡುವಲ್ಲಿ ಹಿಂದೇಟು ಹಾಕುತ್ತಾರೆ. ಗುಬ್ಬಿ ವೀರಣ್ಣ ಅವರು ಆರಂಭದಲ್ಲಿ ನಾಟಕ ಕಂಪನಿಯ ಗೇಟ್ ಕೀಪರ್, ಟಿಕೆಟ್ ಕೊಡುವ ಹಾಗೂ ಬೀದಿಯಲ್ಲಿ ಪ್ರಚಾರ ಮಾಡುವ ಕೆಲಸ ಮಾಡಿದವರು. ಇಂತಹ ತಾಂತ್ರಿಕ ಅನುಭವ ಇದ್ದ ಕಾರಣ ಅವರು ಪ್ರಖ್ಯಾತ ಕಲಾವಿದರಾಗಿ ಬೆಳೆದರು. ಇಂದಿನ ಪೀಳಿಗೆ ಇದನ್ನು ಅರಿಯಬೇಕು ಎಂದರು.
ರಂಗಕರ್ಮಿ ಪ್ರೊ. ಎಚ್.ಎಸ್. ಉಮೇಶ್ ಅಧ್ಯಕ್ಷತೆ ವಹಿಸಿದ್ದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ನಿರ್ಮಲ ಮಠಪತಿ ಮುಖ್ಯ ಅತಿಥಿಯಾಗಿದ್ದರು. ಸಂಸ್ಥೆ ಕಾರ್ಯದರ್ಶಿ ಜನಮನ ಕೃಷ್ಣ ಪ್ರಸ್ತಾವಿಕ ಮಾನಾಡಿದರು. ನಂತರ ಶಿಬಿರಾರ್ಥಿಗಳು ಬಿ.ಎಸ್. ದಿನಮಣಿ ನಿರ್ದೇಶನದಲ್ಲಿ ನನ್ನೊಳಗಿನೊಂದು ಬಿಂದು ಎಂಬ ನಾಟಕ ಪ್ರದರ್ಶಿಸಿದರು.

ಡೆಂಘೀ ನಿಯಂತ್ರಣಕ್ಕೆ 10 ಲಕ್ಷ ಗಪ್ಪಿ ಮೀನು
ಮೈಸೂರು: ಡೆಂಘೀ ತಡೆಗಟ್ಟಲು ರಾಜ್ಯಾದ್ಯಂತ 10 ಲಕ್ಷ ಗಪ್ಪಿ ಮೀನು ವಿತರಣಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಸ್ವಚ್ಛ ಕರ್ನಾಟಕ ಹಸಿರು ಕರ್ನಾಟಕ ರಾಜ್ಯಾಧ್ಯಕ್ಷ ಸೋಮಶೇಖರಗೌಡ ಹೇಳಿದರು. ಶ್ರೀರಂಗಪಟ್ಟಣದ ಚಂದ್ರವನದಲ್ಲಿ ಆ. 4 ರಂದು ತ್ರಿನೇತ್ರ ಸ್ವಾಮಿಗಳ ಹುಟ್ಟುಹಬ್ಬದ ಅಂಗವಾಗಿ ಗಪ್ಪಿ ಮೀನು ನೀಡಲಿದ್ದು, ಶ್ರೀಮಠದ ಮುಖಾಂತರ ಗ್ರಾಮಸ್ಥರಲ್ಲಿ ಗಪ್ಪಿ ಮೀನುಗಳ ಸಾಕಣೆ ಬಗೆಗೆ ಅರಿವು ಮತ್ತು ಜಾಗೃತಿ ಮೂಡಿಸಲಾಗುವುದು. ಇದರಂತೆ ಇನ್ನು ಮುಂದೆ ಈ ಯೋಜನೆಯನ್ನು ಮನೆ- ಮನೆಗೂ ತಲುಪಿಸುವ ಮೂಲಕ ಸೊಳ್ಳೆಗಳ ಮೂಲೋತ್ಪಾಟನೆ ಮಾಡಲಾಗುವುದು ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಈಗಾಗಲೇ ಡೆಂಘೀ ಪೀಡಿತ ಡಿ. ಸಾಲುಂಡಿ ಹಾಗೂ ಅದರ ಸುತ್ತಮುತ್ತಲಿನ ಗ್ರಾಮಗಳಿಗೆ ಭೇಟಿ ನೀಡಿರುವ ಸಂಸ್ಥೆಯು ಅಲ್ಲಿ ಗಪ್ಪಿ ಮೀನುಗಳನ್ನು ವಿತರಿಸುವ ಮೂಲಕ ಸೊಳ್ಳೆಗಳನ್ನು ತಹಬದಿಗೆ ತರಲಾಗಿದೆ. ಈ ಯೋಜನೆಯನ್ನು ರಾಜ್ಯಾದ್ಯಂತ ಜಾರಿಗೆ ತರುವ ಮಹಾದಾಸೆ ಇದೆ. ಕಸದ ತೊಟ್ಟಿಗಳಿಂದ ಆವೃತವಾಗಿರುವ ಪ್ರದೇಶಗಳಲ್ಲಿ ಕಸ ಮುಕ್ತಗೊಳಿಸಿ ಅಲ್ಲಿ ಹೂ ಗಿಡಗಳನ್ನು ಬೆಳೆಸಿ ಜಾಲರಿ ಹಾಕಲಾಗುವುದು. ನಗರಪಾಲಿಕೆ 2ನೇ ವಾರ್ಡಿನಲ್ಲಿ ಕಸಮುಕ್ತ ವಾತಾವರಣ ನಿರ್ಮಿಸಲು ಸ್ವಚ್ಛತಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದರು. ಸಂಸ್ಥೆಯ ಕಾರ್ಯದರ್ಶಿ ಸರಿತಾ, ಅನಂತ್, ಪಾಲಾಕ್ಷ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement