'ಕ್ಷೀರ ಭಾಗ್ಯ ಎಲ್ಲಾ ಮಕ್ಕಳಿಗೂ ಸಿಗಲಿ ಭಾಗ್ಯ'
ಕ.ಪ್ರ.ವಾರ್ತೆ ಕೆ.ಆರ್. ನಗರ ಆ. 2
ರಾಜ್ಯ ಸರ್ಕಾರ ಶಾಲಾ ಮಕ್ಕಳಿಗೆ ಉತ್ತಮ ಪೌಷ್ಟಿಕಾಂಶ ಒದಗಿಸಿ ಅವರನ್ನು ಸದೃಢರನ್ನಾಗಿ ಮಾಡಲು ಜಾರಿಗೆ ತಂದಿರುವ ಕ್ಷೀರಭಾಗ್ಯ ಯೋಜನೆಯ ಪ್ರಯೋಜನವನ್ನು ಮಕ್ಕಳಿಗೆ ತಲುಪಿಸುವ ಜವಾಬ್ದಾರಿ ಎಲ್ಲರ ಮೇಲಿದ್ದು, ಎಲ್ಲರೂ ಇದಕ್ಕೆ ಅಗತ್ಯ ಸಹಕಾರ ನೀಡಬೇಕು ಎಂದು ತಹಸೀಲ್ದಾರ್ ಬಿ.ಎನ್. ವೀಣಾ ಕುಮಾರ್ ಹೇಳಿದರು.
ಇಲ್ಲಿನ ವಿವಿ ರಸ್ತೆಯಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯಲ್ಲಿ ಕ್ಷೀರಭಾಗ್ಯ ಯೋಜನೆಗೆ ಚಾಲನೆ ನೀಡಿ ಮಾತನಾಡಿ, ಯೋಜನೆಯಡಿ ಪ್ರತಿ ವಿದ್ಯಾರ್ಥಿಗೆ ತಾಜಾ ಹಾಲಿನ ಪುಡಿಯನ್ನು ಕುದಿಯುವ ನೀರಿನಲ್ಲಿ ಬೆರೆಸಿ 150 ಮಿಲಿ ಕೆನೆಭರಿತ ಹಾಲು ನೀಡಲಾಗುತ್ತದೆ ಎಂದು ತಿಳಿಸಿದರು.
ವಾರದ ಮೂರು ದಿನಗಳಲ್ಲಿ ಸೋಮವಾರ, ಬುಧವಾರ ಮತ್ತು ಶುಕ್ರವಾರ ಶಾಲಾ ಪ್ರಾರ್ಥನೆಗೆ ಮುಂಚಿತವಾಗಿ ಹಾಲು ನೀಡಲಾಗುವುದು. ತಾಲೂಕಿನ ಒಂದರಿಂದ 10ನೇ ತರಗತಿವರೆಗಿನ ವಿದ್ಯಾರ್ಥಿಗಳಿಗೆ ಹಾಲು ವಿತರಿಸಲಿದ್ದು, ಇದರಿಂದ ಮಕ್ಕಳಿಗೆ ಮತ್ತಷ್ಟು ಪೌಷ್ಟಿಕಾಂಶ ದೊರೆತು ಆರೋಗ್ಯ ವೃದ್ಧಿಸುತ್ತದೆ ಎಂದು ಹೇಳಿದರು. ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಟಿ. ಜವರೇಗೌಡ ಮಾತನಾಡಿದರು. ತಾಲೂಕು ಆರೋಗ್ಯಾಧಿಕಾರಿ ಡಾ. ಶಿವಪ್ರಸಾದ್, ಸಿಡಿಪಿಓ ಸದಾಶಿವ, ಸಾರ್ವಜನಿಕ ಶಿಕ್ಷಣ ಇಲಾಖೆಯ ವಿಷಯ ಪರಿವೀಕ್ಷಕ ಮುನಿಬ್, ಬಿಆರ್ಸಿ ಡಾ.ಬಿ.ಸಿ. ದೊಡ್ಡೇಗೌಡ, ಸಿಆರ್ಪಿಗಳಾದ ನಾಗೇಶ್ ನಾಗರಾಜು, ಶಾಲಾ ಮುಖ್ಯ ಶಿಕ್ಷಕ ಸಣ್ಣತಮ್ಮೇಗೌಡ ಇದ್ದರು.
ಮಿರ್ಲೆ ಗ್ರಾಮದಲ್ಲಿ: ತಾಲೂಕಿನ ಮಿರ್ಲೆ ಗ್ರಾಮದ ಆರನೇ ಅಂಗನವಾಡಿ ಕೇಂದ್ರದ ಮಕ್ಕಳಿಗೆ ಕ್ಷೀರಭಾಗ್ಯ ಯೋಜನೆಯಡಿ ಹಾಲು ವಿತರಣಾ ಕಾರ್ಯಕ್ಕೆ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಉಮಾಚಿದಾನಂದ್ ಚಾಲನೆ ನೀಡಿದರು. ಶಿಕ್ಷಕಿ ರೀನಾ ಮಂಜುನಾಥ್, ಸಹಾಯಕಿ ರಂಗಮ್ಮಣಿ ಮತ್ತು ಪೋಷಕರು ಇದ್ದರು.
ನಂಜನನಾಯ್ಕನಹಳ್ಳಿ ಶಾಲೆ
ಎಚ್.ಡಿ. ಕೋಟೆ: ಸರ್ಕಾರವು ನೂತನವಾಗಿ ಜಾರಿಗೆ ತಂದಿರುವ ಕ್ಷೀರಭಾಗ್ಯ ಯೋಜನೆಗೆ ತಾಲೂಕಿನ ನಂಜನಾಯಕನಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ಮಹದೇವಸ್ವಾಮಿ ಚಾಲನೆ ನೀಡಿದರು. ಸಮಿತಿಯ ಸದಸ್ಯರಾದ ನಂಜಪ್ಪ, ಗೋವಿಂದೇಗೌಡ, ಮಹದೇವಪ್ಪ, ಪ್ರಕಾಶ್, ಶಿವಣ್ಣೇಗೌಡ, ಮಲ್ಲೇಶ್, ಮುಖ್ಯ ಶಿಕ್ಷಕ ಸ್ವಾಮಿ ಹಾಗೂ ಶಿಕ್ಷಕ ವೃಂದ, ಗ್ರಾಮದ ಯಜಮಾನರು, ಪೋಷಕರು ಭಾಗವಹಿಸಿದ್ದರು.