'ಗ್ರಾಹಕರಿಗೆ ಪಿಎಸಿಎಲ್ ಮೋಸ ಮಾಡದಿರಲಿ'
ಕ.ಪ್ರ.ವಾರ್ತೆ ಮೈಸೂರು ಆ. 2
ಮೀನು ನೀಡುವುದಾಗಿ ಗ್ರಾಹಕರಿಂದ ಹಣ ಕಟ್ಟಿಸಿಕೊಂಡಿರುವ ಪರ್ಲ್ಸ್ ಆಗ್ರಟಿಕ್ ಕಾರ್ಪೋರೇಷನ್ ಲಿಮಿಟೆಡ್ (ಪಿಎಸಿಎಲ್) ಸಂಸ್ಥೆಯು ಈ ವಿಚಾರದಲ್ಲಿ ಗ್ರಾಹಕರಿಗೆ ಯಾವುದೇ ಮೋಸ ಮಾಡಬಾರದು ಎಂದು ಕರ್ನಾ ಕ ರಾಜ್ಯ ರೈತ ಸಂಘದ ವರಿಷ್ಠ ಹಾಗೂ ಶಾಸಕ ಕೆ.ಎಸ್. ಪುಟ್ಟಣ್ಣಯ್ಯ ಆಗ್ರಹಿಸಿದರು.
ರಾಷ್ಟ್ರಾದ್ಯಂತ ತನ್ನ ಶಾಖೆಗಳನ್ನು ತೆರೆದು ಸುಮಾರು 30 ರಿಂದ 40 ಸಾವಿರ ಕೋಟಿ ವಹಿವಾಟು ನಡೆಸುತ್ತಿರುವ ಪಿಎಸಿಎಲ್ ಬಗೆಗೆ ದೂರುಗಳು ಕೇಳಿ ಬರುತ್ತಿವೆ. ಮುಂದಿನ ದಿನಗಳಲ್ಲಿ ಇದು ಸಮಸ್ಯೆಯಾಗಿ ಉಲ್ಬಣಿಸುವ ಸಾಧ್ಯತೆ ಇರುವುದರಿಂದ ಮುನ್ನೆಚ್ಚರಿಕೆಯಾಗಿ ಪಿಎಸಿಎಲ್ನ ಮಾಲೀಕರಾದ ಬೆಟ್ಟಚಾರ್ಯ ಹಾಗೂ ಕೃಷ್ಣ ಅವರಿಂದ ಸ್ಪಷ್ಟನೆ ಪಡೆಯಲು 15 ದಿನಗಳ ಗಡುವು ನೀಡಿದ್ದೇವೆ. ಅವರು ಕರ್ನಾಟಕ ರಾಜ್ಯಕ್ಕೆ ಆಗಮಿಸಿ ಸಂಸ್ಥೆಯ ಧ್ಯೇಯೋದ್ದೇಶಗಳು ಹಾಗೂ ಗ್ರಾಹಕರಿಗೆ ಹಣ ಹಿಂತಿರುಗಿಸುವ ಭರವಸೆ ನೀಡುವಂತೆಯೂ ಕೋರಲಾಗಿದೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಏನಿದು ಪಿಎಸಿಎಲ್?: ಪರ್ಲ್ಸ್ ಅರ್ಗಟಿಕ್ ಕಾರ್ಪೋರೇಷನ್ ಲಿಮಿಟೆಡ್ ಸಂಸ್ಥೆಯು ಹಣ ಕಟ್ಟಿಸಿಕೊಂಡು ಜಮೀನು ನೀಡುವ ವಹಿವಾಟು ನಡೆಸುವಂತಹ (ಒಂದು ರೀತಿಯಲ್ಲಿ ನಿವೇಶನ ಅಥವಾ ಜಮೀನು ಚೀಟಿ ನಡೆಸುವ) ಸಂಸ್ಥೆಯಾಗಿದೆ. ದೇಶಾದ್ಯಂತ 300 ಶಾಖೆಗಳನ್ನು ತೆರೆದು 30 ರಿಂದ 40 ಸಾವಿರ ಕೋಟಿಯಷ್ಟು ವಹಿವಾಟು ನಡೆಸುತ್ತಿದೆ. ಕರ್ನಾಟಕ ಒಂದರಲ್ಲೇ 20 ಸಾವಿರ ಕೋಟಿಯಷ್ಟು ವ್ಯವಹಾರ ನಡೆಸುತ್ತಿದೆ. ಯಾವ ಗ್ರಾಹಕ ಸದರಿ ಸಂಸ್ಥೆಗೆ ಹಣ ಕಟ್ಟಲು ಶುರು ಮಾಡಿದ ದಿನಾಂಕದಿಂದ 270 ದಿನಗಳಲ್ಲಿ ನಿವೇಶನ ಅಥವಾ ಜಮೀನು ನೀಡಬೇಕು ಎಂಬುದು ನಿಯಮ. ಆದರೆ, ಹಣ ಕಟ್ಟಿ ಐದು ವರ್ಷವಾದರೂ ಸಂಸ್ಥೆ ಗ್ರಾಹಕರಿಗೆ ಜಮೀನು ನೀಡಿಲ್ಲ. ಅಲ್ಲದೆ, ಕಟ್ಟಿರುವ ಹಣವನ್ನು ವಾಪಸ್ ನೀಡುವಂತೆ ಗ್ರಾಹಕರು ಒತ್ತಾಯಿಸಿದ್ದರೂ ಕಳೆದ ಐದಾರು ತಿಂಗಳಿಂದ ಸತಾಯಿಸುತ್ತಿದೆ ಎಂಬುದು ಪಿಎಸಿಎಲ್ ಏಜೆಂಟರ ವಾದವಾಗಿದೆ.