ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಜಿಪಂಗೆ ಹೆಚ್ಚುವರಿ ಉಪ ಕಾರ್ಯದರ್ಶಿ ಹುದ್ದೆ

Srinivasa Murthy VN
Updated On : 3 Aug 2013, 12:37 pm

ವಿಶೇಷ ವರದಿ
ಕ.ಪ್ರ.ವಾರ್ತೆ ಮೈಸೂರು ಆ. 2
ಮೈಸೂರು ಜಿಲ್ಲಾ ಪಂಚಾಯಿತಿಗೆ ಹೆಚ್ಚುವರಿಯಾಗಿ ಉಪ ಕಾರ್ಯದರ್ಶಿ ಹುದ್ದೆ ಮಂಜೂರು ಮಾಡಲಾಗಿದೆ.
ಅವಿಭಜಿತ ಮೈಸೂರು ಜಿಲ್ಲೆಗೆ ಜಿಪಂ ಆರಂಭವಾದಾಗಲೇ ಎರಡು ಉಪ ಕಾರ್ಯದರ್ಶಿ ಹುದ್ದೆಗಳು ಮಂಜೂರಾಗಿದ್ದು, ಒಬ್ಬರು ಆಡಳಿತ, ಮತ್ತೊಬ್ಬರು ಅಭಿವೃದ್ಧಿ ನೋಡಿಕೊಳ್ಳುತ್ತಿದ್ದರು. ಆದರೆ, 1997ರಲ್ಲಿ ಮೈಸೂರು ಜಿಲ್ಲೆಯನ್ನು ವಿಭಜಿಸಿ, ಚಾಮರಾಜನಗರ ಜಿಲ್ಲೆಯನ್ನು ರಚಿಸಿದಾಗ, ಉಭಯ ಜಿಲ್ಲೆಗಳಿಗೂ ತಲಾ ಒಂದು ಉಪ ಕಾರ್ಯದರ್ಶಿ ಹುದ್ದೆಯನ್ನು ಮರು ವಿನ್ಯಾಸಗೊಳಿಸಲಾಗಿತ್ತು. ಮೈಸೂರು ಜಿಲ್ಲೆಯ ವ್ಯಾಪ್ತಿಗೆ ಏಳು ತಾಲೂಕುಗಳು ಹಾಗೂ 235 ಗ್ರಾಮ ಪಂಚಾಯಿತಿಗಳು ಬರುತ್ತವೆ. ಗ್ರಾಪಂಗಳಿಗೆ ಮೇಲ್ವಿಚಾರಣೆ ಮತ್ತು ಮಾರ್ಗದರ್ಶನದ ಹೊಣೆಗಾರಿಕೆ ಇದೆ.
ಅಲ್ಲದೆ, ಮೈಸೂರು ಪಾರಂಪರಿಕ ಕೇಂದ್ರ ಮತ್ತು ಪ್ರಮುಖ ಪ್ರವಾಸಿ ಕೇಂದ್ರವಾಗಿರುವುದರಿಂದ ಅನೇಕ ಗಣ್ಯರು ಜಿಲ್ಲೆಗೆ ಆಗಾಗ್ಗೆ ಭೇಟಿ ನೀಡುವುದರಿಂದ ಶಿಷ್ಟಾಚಾರ ನಿರ್ವಹಣೆ ಮಾಡಬೇಕಿದೆ. ಜಿಪಂ, ಜಿಲ್ಲಾಧಿಕಾರಿ ಕಚೇರಿ, ಜಿಲ್ಲಾ ಹಾಗೂ ರಾಜ್ಯ ಮಟ್ಟದ ಅನೇಕ ಸಭೆಗಳಲ್ಲಿ ಉಪ ಕಾರ್ಯದರ್ಶಿ ಭಾಗವಹಿಸಬೇಕಾಗುತ್ತದೆ. ಮೈಸೂರಿನಲ್ಲಿಯೇ ಇರುವ ಅಬ್ದುಲ್ ನಜೀರ್ಸಾಬ್ ಗ್ರಾಮೀಣಾಭಿವೃದ್ಧಿ ಸಂಸ್ಥೆಯಲ್ಲಿ ನಡೆಯುವ ಅನೇಕ ತರಬೇತಿ ಕಾರ್ಯಕ್ರಮಗಳಿಗೆ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಬೇಕಾಗುತ್ತದೆ. ಜಿಪಂನ ಮೂರು ಸ್ಥಾಯಿ ಸಮಿತಿಗಳ ಸದಸ್ಯ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಬೇಕಾಗುತ್ತದೆ. ಈ ರೀತಿ ಆಡಳಿತ ಮತ್ತು ಅಭಿವೃದ್ಧಿ- ಎರಡೂ ಜವಾಬ್ದಾರಿಗಳನ್ನು ಒಬ್ಬರೇ ಉಪ ಕಾರ್ಯದರ್ಶಿ ನಿರ್ವಹಿಸುವುದು ಕಷ್ಟ. ಹೀಗಾಗಿ ಹೆಚ್ಚುವರಿ ಉಪ ಕಾರ್ಯದರ್ಶಿ ಹುದ್ದೆಯನ್ನು ಸೃಜಿಸುವಂತೆ ಜಿಪಂ ಮುಖ್ಯ ಕಾರ್ಯದರ್ಶಿ ಕಳೆದ ವರ್ಷದ ಸೆ. 22ರಂದು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದರು. ಅದನ್ನು ಪರಿಶೀಲಿಸಿದ ಸರ್ಕಾರವು ಜಿಪಂನಲ್ಲಿ ಪ್ರಸ್ತುತ ಅಸ್ತಿತ್ವದಲ್ಲಿರುವ ಉಪ ಕಾರ್ಯದರ್ಶಿ (ಹಿರಿಯ ಶ್ರೇಣಿ) ಹುದ್ದೆಯನ್ನು ಉಪ ಕಾರ್ಯದರ್ಶಿ (ಆಡಳಿತ) ಎಂದು ಪದನಾಮೀಕರಿಸಿದೆ. ಹೊಸದಾಗಿ ಉಪ ಕಾರ್ಯದರ್ಶಿ (ಅಭಿವೃದ್ಧಿ) ಎಂಬ ಹೊಸ ಹುದ್ದೆಯನ್ನು ಸೃಜಿಸಿದೆ.
ಅಧಿಕಾರ ಸ್ವೀಕಾರ: ಉಪ ಕಾರ್ಯದರ್ಶಿ (ಆಡಳಿತ) ಆಗಿ ಪ್ರಕಾಶ್ ಕಾರ್ಯನಿರ್ವಹಿಸುತ್ತಿದ್ದು, ಉಪ ಕಾರ್ಯದರ್ಶಿ (ಅಭಿವೃದ್ಧಿ) ಆಗಿ ಕೆ. ಶಿವೇಗೌಡ ಅಧಿಕಾರ ವಹಿಸಿಕೊಂಡಿದ್ದಾರೆ. ಇವರು ಶಿಕ್ಷಣ ಇಲಾಖೆಯ ಉಪ ನಿರ್ದೇಶಕರು. ಹಾಲಿ ವಸಂತಮಹಲ್ ಡಯಟ್ನಲ್ಲಿ ಪ್ರಾಂಶುಪಾಲ ಮತ್ತು ಉಪ ನಿರ್ದೇಶಕರು (ಅಭಿವೃದ್ಧಿ) ಆಗಿ ಕಾರ್ಯನಿರ್ವಹಿಸುತ್ತಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement