ವಿವಿಧೆಡೆ ಚಾಮುಂಡೇಶ್ವರಿ ಆರಾಧನೆ
ಕ.ಪ್ರ.ವಾರ್ತೆ ಮೈಸೂರು ಆ. 2
ಆಷಾಢ ಮಾಸದ ಅಂಗವಾಗಿ ಕಡೇ ಶುಕ್ರವಾರದ ವಿಶೇಷ ಪೂಜೆಯು ಇಲ್ಲಿನ ವಿವಿಧ ದೇವಸ್ಥಾನಗಳಲ್ಲಿ ಹಾಗೂ ಸಂಘ ಸಂಸ್ಥೆಗಳಲ್ಲಿ ನಡೆಯಿತು.
ಚಾಮುಂಡಿ ತಪ್ಪಲಿನಲ್ಲಿರುವ ಸುತ್ತೂರು ಮಠದ ದೇವಸ್ಥಾನದಲ್ಲಿ ಈ ಸಂಬಂಧ ವಿಶೇಷ ಪೂಜೆ ನಡೆಯಿತು. ಅಲ್ಲದೆ, ಬೆಟ್ಟಕ್ಕೆ ಬರುವ ಭಕ್ತರಿಗಾಗಿ ಏರ್ಪಡಿಸಿದ್ದ ದಾಸೋಹದಲ್ಲಿ ಬಿಸಿಬೇಳೆ ಬಾತ್, ಮೊಸರನ್ನ ಹಾಗೂ ಮೈಸೂರು ಪಾಕ್ ವಿತರಿಸಲಾಯಿತು. ಈ ಸಂದರ್ಭದಲ್ಲಿ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಇದ್ದರು.
ಮಂಡಿಮೊಹಲ್ಲದ ಎಲ್ಲಮ್ಮಾಂಬ, ಚಂದ್ರಗುಪ್ತಾಂಬ ಧರ್ಮಸಂಸ್ಥೆಯು ಶಕ್ತಿ ದೇವಿ ಚಾಮುಂಡೇಶ್ವರಿ ಅಮ್ಮನವರ ವಿಶೇಷ ಪೂಜೆ ನಡೆಸಿತು. ದೇವಿಗೆ ಭಕ್ತರು ತಂಬಿಟ್ಟಿನ ಆರತಿ ಬೆಳಗಿದರು. ಅಮ್ಮನವರಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು. ಸಂಸ್ಥೆ ಅಧ್ಯಕ್ಷ ಜಿ. ನಾರಾಯಣ್, ಉಪಾಧ್ಯಕ್ಷ ಎಚ್.ಎನ್. ಮಂಜುನಾಥ್, ಪ್ರಧಾನ ಕಾರ್ಯದರ್ಶಿ ಎಂ. ರುದ್ರೇಶ್ ಹಾಗೂ ಖಜಾಂಚಿ ಶಿವಕಮಾರ್ ಇದ್ದರು.
ನರಸಿಂಹರಾಜ ಮೊಹಲ್ಲಾದ ಅಂಬಾಭವಾನಿ ಅಮ್ಮನವರ ದೇವಸ್ಥಾನದಲ್ಲಿ ಪ್ರಧಾನ ಅರ್ಚಕರಾದ ಎನ್.ವಿ. ಶರ್ಮ ಹಾಗೂ ಮೋಹನರಾವ್ಸ್ವಾಮಿ ಅವರ ನೇತೃತ್ವದಲ್ಲಿ ವಿಶೇಷ ಪೂಜೆ ನಡೆಸಲಾಯಿತು. ಜೈ ಮಾರುತಿ ಭಕ್ತ ಮಂಡಳಿಯವರು ಭಜನೆ ನಡೆಸಿಕೊಟ್ಟರು.
ದೇವಸ್ಥಾನ ಮಂಡಳಿ ಅಧ್ಯಕ್ಷ ಇ. ಮಾರುತಿರಾವ್ ಪವಾರ್, ಉಪಾಧ್ಯಕ್ಷ ಕೇಶವನಾಥರಾವ್ ಜಾಧವ್, ಗೌರವ ಕಾರ್ಯದರ್ಶಿ ಕೆ.ಎಚ್. ಸುರೇಶ್ರಾವ್ ಹಾಗೂ ಕಾರ್ಯದರ್ಶಿ ಕೆ. ಬಾಲಗಂಗಾಧರ ರಾವ್ ಇದ್ದರು.
ಖಿಲ್ಲೆ ಮೊಹಲ್ಲದ ಶೃಂಗೇರಿ ಶಂಕರ ಮಠದಲ್ಲಿ ಜಗದ್ಗುರು ಶಂಕರಾಚಾರ್ಯ ಮಹಾಸಂಸ್ಥಾನದ ವತಿಯಿಂದ ಏರ್ಪಡಿಸಿದ್ದ ಅಷಾಢ ಶುಕ್ರವಾರ ಮಹೋತ್ಸವದಲ್ಲಿ ದೇವಿಗೆ ರಾಜರಾಜೇಶ್ವರಿ ಅಲಂಕಾರ ಹಾಗೂ ವಿಶೇಷ ಪೂಜೆ ನಡೆಸಲಾಯಿತು. ವಿದ್ವಾನ್ ಸಾಯಿತೇಜಸ್ ಚಂದ್ರಶೇಖರ್ ವೃಂದದವರು ಶಾಸ್ತ್ರೀಯ ಸಂಗೀತ ಗಾಯನ ನಡೆಸಿಕೊಟ್ಟರು.
ಚಾಮರಾಜ ಮೊಹಲ್ಲಾದ ಚಾಮುಂಡೇಶ್ವರಿ ಪೂಜಾ ಸಮಿತಿಯಲ್ಲಿ ಆಷಾಢ ಶುಕ್ರವಾರದ ಅಂಗವಾಗಿ ಓಂಕಾರ್ ಮೆಲೋಡಿಸ್ ತಂಡದಿಂದ ಸಂಗೀತ ಕಾರ್ಯಕ್ರಮ ನಡೆಯಿತು.
ವಿದ್ಯಾರಣ್ಯಪುರಂ ಆವನಿ ಶೃಂಗೇರಿ ಜಗದ್ಗುರು ಶಂಕರಾಚಾರ್ಯ ಮಹಾಸಂಸ್ಥಾನದ ಆಶ್ರಯದಲ್ಲಿ ಶಾರದಾ ಪೀಠದ ಶಾಖೆಯಲ್ಲಿ ಆಯೋಜಿಸಿರುವ ಕಾರ್ಯಕ್ರಮದಲ್ಲಿ ದೇವಿಗೆ ರಾಜರಾಜೇಶ್ವರಿ ಅಲಂಕಾರ ಮಾಡಲಾಯಿತು. ಅಲ್ಲದೆ, ವಿದುಷಿ ಎನ್. ಭಾರತಿ ವೃಂದದವರು ವೀಣಾವಾದನ ನಡೆಸಿಕೊಟ್ಟರು.