ಸ್ಪರ್ಧೆಗೆ ಸದಾ ಸಿದ್ಧರಾಗಿ: ವಿದ್ಯಾರ್ಥಿಗಳಿಗೆ ಮನವಿ
ಕ.ಪ್ರ.ವಾರ್ತೆ ಮೈಸೂರು ಆ. 2
ಸ್ಪರ್ಧಾತ್ಮಕ ಜಗತ್ತಿನಲ್ಲಿರುವ ವಿದ್ಯಾರ್ಥಿಗಳು ಸದಾ ಸ್ಪರ್ಧೆಗೆ ತಯಾರಿ ನಡೆಸುವಂತರಾಗಿರಬೇಕು ಎಂದು ಜಿಲ್ಲಾ ಪೊಲೀಸ್ ಮುಖ್ಯಾಧಿಕಾರಿ ಅಭಿನವ್ ಖರೆ ಸಲಹೆ ಮಾಡಿದರು.
ಬನ್ನೂರು ರಸ್ತೆಯಲ್ಲಿರುವ ಜ್ಞಾನಸರೋವರ ಅಂತಾರಾಷ್ಟ್ರೀಯ ವಸತಿ ಶಾಲೆಯಲ್ಲಿ ವಿದ್ಯಾರ್ಥಿಗಳ ಪದಗ್ರಹಣ ಸಮಾರಂಭ ಮುಖ್ಯ ಅತಿಥಿಯಾಗಿ ಮಾತನಾಡಿ, ನೂತನ ನಾಯಕ, ನಾಯಕಿ ಮತ್ತು ಉಪ ನಾಯಕ, ಉಪನಾಯಕಿಯರಿಗೆ ಶುಭಾಶಯ ಕೋರಿದರು. ಪಿಯರ್ಸನ್ ವಿದ್ಯಾಸಂಸ್ಥೆಯ ಅಧ್ಯಕ್ಷ ಉಮಾಶಂಕರ್ ಮಾತನಾಡಿ, ಆಧುನಿಕ ಯುಗದಲ್ಲಿ ಮಕ್ಕಳಿಗೆ ಮಾಹಿತಿ ತಂತ್ರಜ್ಞಾನದ ಮೂಲಕ ಬೋಧಿಸಿದರೆ ಉಜ್ವಲ ಭವಿಷ್ಯ ಕಂಡುಕೊಳ್ಳಲು ಸಾಧ್ಯ ಎಂದು ಅಭಿಪ್ರಾಯಪಟ್ಟರು. ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಎಸ್. ಸುಧಾಕರ ಶೆಟ್ಟಿ ಮಾತನಾಡಿ, ಇಂತಹ ಕಾರ್ಯಕ್ರಮಗಳು ವಿದ್ಯಾರ್ಥಿಗಳಲ್ಲಿ ನಾಯಕತ್ವ ಗುಣ ಬೆಳೆಸುತ್ತವೆ ಹಾಗೂ ಅವರಲ್ಲಿ ಜವಾಬ್ದಾರಿ ಹೆಚ್ಚಿಸುತ್ತವೆ. ವಿದ್ಯಾರ್ಥಿಗಳು ನಾಡು- ನುಡಿಗೆ ಹಾಗೂ ಹಿರಿಯರಿಗೆ ಗೌರವ ಕೊಡುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಹೇಳಿದರು. ಶಾಲಾ ಪ್ರಾಂಶುಪಾಲ ಎಂ. ವೆಂಕಟೇಶ್ ಮಾತನಾಡಿದರು. ಸಂಸ್ಥೆಯ ಕಾರ್ಯದರ್ಶಿ ಸುಖಲತಾ ಶೆಟ್ಟಿ, ಸಿಇಒ ಪವನ್ಕುಮಾರ್ ಶೆಟ್ಟಿ, ಮುಕುಂದ್ ಭಾಗವಹಿಸಿದ್ದರು. ಆಕಾಶ್ ಶೆಟ್ಟಿ ಸ್ವಾಗತಿಸಿದರು.