ಅರಣ್ಯಭೂಮಿ ಅಭಿವೃದ್ಧಿಗೆ ಯೋಜನೆಗೆ ಮನವಿ
ಹುಣಸೂರು: ಸಾಮೂಹಿಕ ಅರಣ್ಯ ಭೂಮಿಗೆ ಅಭಿವೃದ್ಧಿ ಯೋಜನೆ ರೂಪಿಸಲು ಸೂಚಿಸುವಂತೆ ಗಿರಿಜನ ಕ್ರಿಯಾಕೂಟ- ಕರ್ನಾಟಕ ಮತ್ತು ರಾಜ್ಯ ಮೂಲ ನಿವಾಸಿ ವೇದಿಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಲ್ಲಿ ಮನವಿ ಮಾಡಿದೆ. ಅರಣ್ಯವಾಸಿಗಳಿಗೆ ಹಕ್ಕುಪತ್ರ ನೀಡಲು ಪ್ರಸಕ್ತ ಸಾಲಿನಲ್ಲಿ 25 ಕೋಟಿ ಮೀಸಲಿಡಲಾಗಿದೆ. ಆ ಹಣಕ್ಕೆ ಯೋಜನೆ ರೂಪಿಸಬೇಕಿದೆ. ಜೇನುಕುರುಬ ಮೂಲನಿವಾಸಿಗಳಿಗೆ ಮನೆ ಕಟ್ಟಲು ಇರುವ ಹಣ ಹಾಗೆ ಇದೆ. ಉಳಿದಂತೆ ಕಿರು ಅರಣ್ಯ ಉತ್ಪನ್ನ ಸಂಗ್ರಹಿಸಲು ಸ್ಮಶಾನ ಹಾಗೂ ಪೂಜಾ ಸ್ಥಳ ಬಳಸಿ, ಕಾಡಿನಿಂದ ಗಿಡಮೂಲಿಕೆ ತರಲು ಅವಕಾಶ ಮಾಡಿಕೊಡುವಂತೆ ಗಿರಿಜನ ಕ್ರಿಯಾಕೂಟದ ಸಂಚಾಲಕ ಎಸ್. ಶ್ರೀಕಾಂತ್ ಕೋರಿದ್ದಾರೆ.
ಪಪಂ ಮಳಿಗೆ ವಿತರಣೆಯಲ್ಲಿ ಅಕ್ರಮ: ಆರೋಪ
ಟಿ. ನರಸೀಪುರ: ಇಲ್ಲಿನ ಲಿಂಕ್ ರಸ್ತೆಯಲ್ಲಿ ಪಪಂ ವತಿಯಿಂದ ಪೆಟ್ಟಿಗೆ ಅಂಗಡಿಗಳನ್ನು ತೆರವುಗೊಳಿಸಿ, ಮಳಿಗೆಗಳನ್ನು ನಿರ್ಮಿಸಿ ವಿತರಣೆಯಲ್ಲಿ ಅಕ್ರಮ ನಡೆದಿದೆ ಎಂದು ಪೆಟ್ಟಿಗೆ ಅಂಗಡಿ ವ್ಯಾಪಾರಿ ಸಿದ್ದು ಆರೋಪಿಸಿದ್ದಾರೆ. ಪಪಂ ಪ್ರತಿ ಮಳಿಗೆಗೆ 85 ಸಾವಿರ ಪಡೆದು ಕೇವಲ 60 ಸಾವಿರ ರಶೀದಿ ನೀಡುತ್ತಿದ್ದಾರೆ. ಅದರಂತೆ ಒಟ್ಟು 87 ಮಳಿಗೆಗಳಿಗೆ, ಒಂದು ಮಳಿಗೆಗೆ 25 ಸಾವಿರ ಹೆಚ್ಚುವರಿ ಹಣ ಪಡೆದಿದ್ದಾರೆ. ಸುಮಾರು 40 ರಿಂದ 50 ವರ್ಷದಿಂದ ಬಡ ವ್ಯಾಪಾರಸ್ಥರು ಪೆಟ್ಟಿಗೆ ಅಂಗಡಿ ವ್ಯಾಪಾರ ಮಾಡಿಕೊಂಡು ಜೀವನ ನಡೆಸುತ್ತಿದ್ದು, ಅವರುಗಳಿಗೆ ಲಿಂಕ್ ರಸ್ತೆಯಲ್ಲಿ ಕೆಳ ಅಂತದಲ್ಲಿರುವ ಮಳಿಗೆಗಳನ್ನು ನೀಡಿ ಅನ್ಯಾಯವೆಸಗಿದ್ದಾರೆ ಎಂದು ದೂರಿದ್ದಾರೆ. ಜಿಲ್ಲಾಧಿಕಾರಿಗಳು ಮಳಿಗೆ ವಿತರಣೆಯಲ್ಲಿ ಆಗಿರುವ ಅಕ್ರಮದ ಬಗ್ಗೆ ಪರಿಶೀಲಿಸಿ, ಅನ್ಯಾಯ ಮಾಡಿರುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.