'ದಲಿತರಿಗೆ ಭೂಮಿ ನೀಡಿ'
ಟಿ. ನರಸೀಪುರ: ತಾಲೂಕಿನ ಮಾದಿಗಹಳ್ಳಿ ಗ್ರಾಮದಲ್ಲಿ ದಲಿತ ಸಮುದಾಯದ ಜನರಿಗೆ ನಿವೇಶನ ಸೌಲಭ್ಯ ಕಲ್ಪಿಸಲು ಅಗತ್ಯವಿರುವ ಭೂಮಿ ಸ್ವಾಧೀನಪಡಿಕೊಳ್ಳಲು ಜಿಲ್ಲಾ ಹಾಗೂ ತಾಲೂಕು ಆಡಳಿತ ಕ್ರಮ ಕೈಗೊಳ್ಳುವಂತೆ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಘಟನಾ ಸಂಚಾಲಕ ಚುಂಚನಹಳ್ಳಿ ಮಲ್ಲೇಶ್ ಹೇಳಿದರು.
ಬನ್ನೂರು ಹೋಬಳಿಯ ಮಾದಿಗಹಳ್ಳಿ ಗ್ರಾಮದಲ್ಲಿ ದಲಿತ ಸಮುದಾಯದ ಜನರಿಗೆ ನಿವೇಶನ ಕಲ್ಪಿಸಲು ಸರ್ವೇ ನಂ.31,2, 32,5 ಹಾಗೂ 32,4ರಲ್ಲಿ 2 ಎಕರೆ 8 ಗುಂಟೆ ಜಮೀನು ಗುರುತಿಸಿ, ಸರ್ಕಾರ 6 ಲಕ್ಷ ಬಿಡುಗಡೆ ಮಾಡಿದ್ದರೂ ಭೂ ಸ್ವಾಧೀನಕ್ಕೆ ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿಲ್ಲವೆಂದು ಆರೋಪಿಸಿದರು.
ಆ. 5 ರಂದು ಪ್ರತಿಭಟನೆ: ಗ್ರಾಮದಲ್ಲಿ ನಿವೇಶನ ರಹಿತ 53 ದಲಿತ ಕುಟುಂಬಗಳ ಫಲಾನುಭವಿಗಳನ್ನು ಗುರುತಿಸಿ, ಪಟ್ಟಿಯನ್ನು ಮಾಡಲಾಗಿದ್ದರೂ ಕಳೆದ ಐದು ತಿಂಗಳಿನಿಂದಲೂ ಜಿಲ್ಲಾಡಳಿತ ಭೂ ಸ್ವಾಧೀನಕ್ಕೆ ಹಿಂದೇಟು ಹಾಕುತ್ತಿದೆ. ಅಧಿಕಾರಿಗಳ ನಿರ್ಲಕ್ಷ್ಯ ಖಂಡಿಸಿ ಭೂಸ್ವಾಧೀನಕ್ಕೆ ಒತ್ತಾಯಿಸಿ ಆ. 5 ರಂದು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಗುವುದು ಎಂದು ಮಲ್ಲೇಶ್ ತಿಳಿಸಿದರು.
ತಾಲೂಕು ಸಂಚಾಲಕ ಬನ್ನಳ್ಳಿ ಸೋಮಣ್ಣ, ಸುರೇಶ್ ಯರಗನಹಳ್ಳಿ, ಮಹೇಶ್, ಕೊಳತ್ತೂರು ಪ್ರಭಾಕರ್ ಇದ್ದರು.
ಕನ್ನಡ ಸೇನೆ ಪ್ರತಿಭಟನೆ
ಎಚ್.ಡಿ. ಕೋಟೆ: ಮೈಸೂರು- ಮಾನಂದವಾಡಿ ರಸ್ತೆಯ ತಾಲೂಕಿನ ಗಡಿಭಾಗವಾದ ಕಂಚಮಳ್ಳಿ ಗ್ರಾಮದ ಹತ್ತಿರ ವನಸಿರಿನಾಡಿಗೆ ಸ್ವಾಗತ ಕೋರುವ ನಾಮಫಲಕ ಸಿದ್ಧಪಡಿಸುವಂತೆ ಒತ್ತಾಯಿಸಿ ತಾಲೂಕು ಕನ್ನಡ ಸೇನೆಯ ಕಾರ್ಯಕರ್ತರು ರಸ್ತೆತಡೆ ನಡೆಸಿದರು.
ನಂಜುಂಡಪ್ಪ ವರದಿ ಆಧಾರದ ಮೇಲೆ ತಾಲೂಕಿನ ಅಭಿವೃದ್ಧಿಗಾಗಿ ಸರ್ಕಾರದ ವತಿಯಿಂದ ಅಪಾರ ಪ್ರಮಾಣದ ಹಣವು ಹರಿದು ಬರುತ್ತಿದ್ದರೂ ಚುನಾಯಿತ ಪ್ರತಿನಿಧಿಗಳು, ತಾಲೂಕು ಮಟ್ಟದ ಅಧಿಕಾರಿಗಳು ಮುರಿದು ಬಿದ್ದಿರುವ ಸ್ವಾಗತ ಕಮಾನನ್ನು ಸಿದ್ಧಪಡಿಸಿರುವುದಿಲ್ಲ, ಈ ಕಮಾನು ಬಿದ್ದು, ಎರಡು ವರ್ಷ ಕಳೆದಿದ್ದರೂ ಯಾವುದೆ ಕ್ರಮ ವಹಿಸಿಲ್ಲ. ಈ ಮಾರ್ಗದಲ್ಲಿ ಬರುವ ಹಲವರಿಗೆ ಈ ದಾರಿಯು ಮರೆತು ಹೋಗಿರುತ್ತದೆ. ಆದ್ದರಿಂದ ಕೂಡಲೇ ತಾಲೂಕು ಆಡಳಿತ ಸೂಕ್ತ ಕ್ರಮ ಕೈಗೊಳ್ಳದೆ ಇದ್ದರೆ ಮುಂದಿನ ದಿನಗಳಲ್ಲಿ ಕನ್ನಡ ಸೇನೆಯವರು ಉಪವಾಸ ಸತ್ಯಾಗ್ರಹ ಹಮ್ಮಿಕೊಳ್ಳಲಾಗುವುದೆಂದು ಎಚ್ಚರಿಸಿದ್ದಾರೆ.
ತಾಲೂಕು ಅಧ್ಯಕ್ಷ ಕುಮಾರ, ವಿನೋದ್ ಕುಮಾರ್, ರವಿಕುಮಾರ್, ವೆಂಕಟೇಶ್, ನಟೇಶ್, ಆನಂದಶೆಟ್ಟಿ, ಶಿವಕುಮಾರ, ರುದ್ರಕುಮಾರ, ಲೋಕೇಶ್, ಮಧು ಪ್ರೇಮಸಾಗರ್, ಪ್ರಕಾಶ್ ಹಾಗೂ ಸೇನೆಯ ಪದಾಧಿಕಾರಿಗಳು ಭಾಗವಹಿಸಿದ್ದರು.