ಪಾಪಣ್ಣ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಪ್ರತಿಭಟನೆ
ಕ.ಪ್ರ.ವಾರ್ತೆ ಹುಣಸೂರು ಆ. 3
ಗ್ರಾಮಸ್ಥರಿಗೆ ಮಾನಸಿಕ ಹಾಗೂ ದೈಹಿಕ ಹಿಂಸೆ ನೀಡುತ್ತಿರುವ ಮಾಜಿ ಶಾಸಕ ಕೋಡಿ ವಿ. ಪಾಪಣ್ಣ ಹಾಗೂ ಪುತ್ರ ಸತೀಶ್ ವಿರುದ್ಧ ಕಾನೂನು ಕ್ರಮ ಜರುಗಿಸುವಲ್ಲಿ ತಾಲೂಕು ಆಡಳಿತ ವಿಫಲವಾಗಿರುವುದನ್ನು ಖಂಡಿಸಿ, ಸಂತೆಕೆರೆ ಕೋಡಿ ಗ್ರಾಮಸ್ಥರು ಹಾಗೂ ದಸಂಸ ವತಿಯಿಂದ ಎರಡು ಗಂಟೆಗೂ ಹೆಚ್ಚು ಕಾಲ ರಸ್ತೆ ಬಂದ್ ಮಾಡಿ ಪ್ರತಿಭಟಿಸಿದರು.
ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಧರ್ಮಾಪುರ ಗ್ರಾಪಂ ಮಾಜಿ ಅಧ್ಯಕ್ಷ ಸುರೇಂದ್ರ ಹಾಗೂ ದಲಿತ ಮುಖಂಡ ಹರಿಹರ ಆನಂದಸ್ವಾಮಿ, ಮಾಜಿ ಶಾಸಕರು ಈ ಭಾಗದ ನಾಯಕರಾಗಿದ್ದು, ಸಾರ್ವಜನಿಕರೊಂದಿಗಿನ ಈ ನಡವಳಿಕೆ ಆಶ್ಚರ್ಯ ತಂದಿದೆ. ಸಮಸ್ಯೆ ಪರಿಹರಿಸಬೇಕಾದವರೆ ಸಮಸ್ಯೆಗಳನ್ನು ಸೃಷ್ಟಿಸುತ್ತಿದ್ದಾರೆ. ಪೊಲೀಸ್ ಹಾಗೂ ಕಂದಾಯ ಇಲಾಖೆ ಕೂಡಲೇ ಈ ಕುರಿತು ಕಾನೂನು ಕ್ರಮ ಕೈಗೊಂಡು ಸಮಸ್ಯೆ ಪರಿಹರಿಸಲಿ ಎಂದು ಆಗ್ರಹಿಸಿದರು.
ದಸಂಸ ತಾಲೂಕು ಸಂಚಾಲಕ ರತ್ನಪುರಿ ಪುಟ್ಟಸ್ವಾಮಿ ಮಾತನಾಡಿದರು. ಧರ್ಮಾಪುರ ಗ್ರಾಪಂ ಮಾಜಿ ಅಧ್ಯಕ್ಷರಾದ ಸುರೇಂದ್ರ, ಚಲುವಯ್ಯ, ಗ್ರಾಪಂ ಸದಸ್ಯರಾದ ಕಾಳಯ್ಯ, ಸದಾನಂದ, ಮುಖಂಡರಾದ ಸುರೇಂದ್ರ, ರಮೇಶ್, ಶಿವಣ್ಣ, ನಂಜಪ್ಪ, ಮಹದೇವು, ಸ್ವಾಮಿ, ಗಿರಿಜನರಾದ ವೆಂಕಟೇಶ್, ದೇವಮ್ಮ, ನಿಂಗಮ್ಮ, ಯ. ಯತ್ತಪ್ಪ, ನೂರುಳ್ಳಯ್ಯ, ಸಣ್ಣಪ್ಪ, ಹಾಲೇಗೌಡ, ಬಿಂದೇಗೌಡ, ಮಲ್ಲೇಗೌಡ ಸೇರಿದಂತೆ ಮುನ್ನೂರಕ್ಕೂ ಹೆಚ್ಚು ಗ್ರಾಮಸ್ಥರು ಭಾಗವಹಿಸಿದ್ದರು.
ಭೂ ಒತ್ತುವರಿ ಸಾಬೀತಾದರೆ ನೇಣು: ಪಾಪಣ್ಣ
ಹುಣಸೂರು: ಸರ್ಕಾರದ ಜಮೀನು, ಕಾಲುವೆ, ಏರಿ, ರಸ್ತೆ ಒತ್ತುವರಿ ಮಾಡಿಕೊಂಡಿದ್ದಾರೆಂದು ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಆರೋಪ ಮಾಡುತ್ತಿವೆ. ಒಂದು ವೇಳೆ ತನಿಖೆ ನಡೆದು ಆರೋಪ ಸಾಬೀತಾದಲ್ಲಿ ತಾವು ನೇಣಿಗೆ ಶರಣಾಗಲು ಸಿದ್ಧ ಎಂದು ಮಾಜಿ ಶಾಸಕ ವಿ. ಪಾಪಣ್ಣ ಸವಾಲು ಹಾಕಿದ್ದಾರೆ.
ಜಮೀನನ್ನು ಒತ್ತುವರಿ ಮಾಡಿದ್ದಾರೆಂದು ದಸಂಸ ಮುಖಂಡ ಹರಿಹರ ಆನಂದಸ್ವಾಮಿ, ಪುಟ್ಟಸ್ವಾಮಿ ಮತ್ತು ಗ್ರಾಪಂ ಮಾಜಿ ಅಧ್ಯಕ್ಷ ಸುರೇಂದ್ರ ಅವರು ರಸ್ತೆತಡೆ ನಡೆಸಿ ಪ್ರತಿಭಟಿಸಿದ್ದಾರೆ. ಇದು ರಾಜಕೀಯದಿಂದ ಕೂಡಿದೆ. ಈ ಬಗ್ಗೆ ಹಲವಾರು ಬಾರಿ ಕಂದಾಯ ಇಲಾಖೆ ಮತ್ತು ಪೊಲೀಸ್ ಇಲಾಖೆ ಅಧಿಕಾರಿಗಳಿಗೆ ಮನವಿ ಮಾಡಿದರೂ ಸ್ಪಂದಿಸಿಲ್ಲ. ಇದಕ್ಕೆ ತಾಲೂಕು ಆಡಳಿತವೇ ನೇರ ಹೊಣೆಯಾಗಬೇಕಾಗುತ್ತದೆ. ಇನ್ನಾದರೂ ಜಿಲ್ಲಾಡಳಿತ ನೇತೃತ್ವದಲ್ಲಿ ತನಿಖೆ ನಡೆಯಲಿ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಕಳೆದ ಆರು ತಿಂಗಳಿನಿಂದ ಹಲವಾರು ಬಾರಿ ಈ ಜಮೀನಿನ ವಿಚಾರವಾಗಿ ಘರ್ಷಣೆಗಳು ಸಂಭವಿಸುತ್ತಿವೆ. ಪೊಲೀಸ್ ಇಲಾಖೆ ಮತ್ತು ಕಂದಾಯ ಇಲಾಖೆಗೆ ದೂರು ನೀಡಿದ್ದರೂ ಕ್ರಮ ಕೈಗೊಂಡಿಲ್ಲ. ಜು. 29ರಂದು ಬಿಂದೇಗೌಡರ ಕುಂಟುಂಬ ನನ್ನ ಮತ್ತು ಪುತ್ರ ಸತೀಶ್ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ದೂರಿದರು.
ಕಣ್ಣೀರಿಟ್ಟ ಮಾಜಿ ಶಾಸಕ
ತಾವು ಕಳೆದ 40 ವರ್ಷಗಳಿಂದ ತಾಲೂಕಿನ ಸೇವೆ ಮಾಡಿದ್ದೇನೆ. ತಮ್ಮ ಜಮೀನು ಹಿಡುವಳಿಯಿಂದ ಕ್ರಯ ಮಾಡಿಕೊಂಡಿದ್ದೇನೆ ಹೊರತು, ನನಗೆ ಸರ್ಕಾರ ನೀಡಿಲ್ಲ. ಈ ಬಗ್ಗೆ ತನಿಖೆಯಾಗಲಿ. ನಾನು 1999ರಲ್ಲಿ ರಮೇಶ್ ಎಂಬವರಿಗೆ ತರೀಕಲ್ ಸರ್ವೇ ನಂ. 4,1 ರಲ್ಲಿ 20 ಗುಂಟೆ ಜಮೀನು ನೀಡಿದ್ದೆ. ರಮೇಶ್ ಅವರಿಂದ 2004ರಲ್ಲಿ ಬಿಂದೇಗೌಡರಿಗೆ 15 ಗುಂಟೆ ಜಮೀನು ಮಾರಾಟ ಮಾಡುವಾಗ ಚೆಕ್ಕುಬಂದಿ ಬದಲಾಯಿಸಿ ಮಾರಾಟ ಮಾಡಿದ್ದಾರೆ. ಇದನ್ನೇ ಗುರಿಯಾಗಿಟ್ಟುಕೊಂಡು ನನ್ನ ಜಮೀನನ್ನು ಆಕ್ರಮಿಸಲು ಯತ್ನಿಸಿದ್ದಾರೆಂದು ಆರೋಪಿಸಿ ಕಣ್ಣೀರಿಟ್ಟರು.
ಜೇನು ಕುರುಬರ ಆಸ್ತಿ ಕಬಳಿಕೆ: ಜೇನು ಕುರುಬರ ಆಸ್ತಿಯನ್ನು ಯಾರು ಆತಿಕ್ರಮಿಸಿಕೊಂಡು ಜಮೀನು ಮಾಡಿಕೊಂಡಿದ್ದಾರೆ. ಮನೆ ಕಟ್ಟಿದ್ದಾರೆ ಎಂಬ ನಿಜಾಂಶದ ಬಗ್ಗೆ ತನಿಖೆ ನಡೆಸಲಿ ಎಂದು ಒತ್ತಾಯಿಸಿದರು.ಪಿಎಲ್‌ಡಿ ಬ್ಯಾಕಿನ ಉಪಾಧ್ಯಕ್ಷ ಪಿ. ಸತೀಶ್, ಗ್ರಾಪಂ ಸದಸ್ಯ ಶಿವಕುಮಾರ್ ಇದ್ದರು.